ಕಾಸರಗೋಡು: ಬಾಕಿಯಿರುವ ತೆರಿಗೆ ವಸೂಲಿ ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಫಲವಾಗಿರುವ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಜನಸಾಮಾನ್ಯರಿಗೆ ಭಾರಿ ತೆರಿಗೆ ವಿಧಿಸುವ ಮೂಲಕ ಸಾರ್ವಜನಿಕರ ಜೇಬು ಕೊಳ್ಳೆಹೊಡೆಯುವ ತಂತ್ರಕ್ಕೆ ಬಿಜೆಪಿ ಅವಕಾಶ ನೀಡದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ಟಿ.ರಮೇಶ್ ಹೇಳಿದ್ದಾರೆ. ಅವರು ಎಡರಂಗ ಸರ್ಕಾರದ ಜನವಿರೋಧಿ ಬಜೆಟ್ ವಿರುದ್ಧ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಗುರುವಾರ ನಡೆದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಡಜನರಿಂದ ತೊಡಗಿ ಎಲ್ಲಾ ವರ್ಗದ ಜನರ ಮೇಲೆ ಹೊರೆಯಾಗುವ ಬಜೆಟನ್ನು ರಾಜ್ಯದ ಹಣಕಾಸು ಸಚಿವರು ಮಂಡಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ 7100 ಕೋಟಿ ರೂಪಾಯಿ ಬಾಕಿ ವಸೂಲಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದಾಗಿ ಸಿಎಜಿ ವರದಿ ಉಲ್ಲೇಖಿಸಿದೆ. ಒಟ್ಟು ಬಾಕಿ ಹಣದಲ್ಲಿ ಆರು ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಸ್ಥಳೀಯ ಸಂಸ್ಥೆಗಳಿಂದ ವಸೂಲಿ ಮಾಡಬೇಕಿದೆ.
ಕೇರಳದ ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಮೊತ್ತ ಬಾಕಿ ಉಳಿಸಿಕೊಂಡಿದ್ದಾರೆ. 1ಸಾವಿರ ಕೋಟಿಗೂ ಹೆಚ್ಚು ಹಣವನ್ನು ಕ್ರೋಡೀಕರಿಸಲು ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳ ಮೇಲೆ ಸೆಸ್ ವಇಧಿಸಲಾಗಿದೆ. ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ನಿಗದಿತ ಸಮಯದಲ್ಲಿ ವಸೂಲಿ ಮಾಡುವುದನ್ನು ಬಿಟ್ಟು, ಸರ್ಕಾರ ಹೆಚ್ಚುವರಿ ತೆರಿಗೆ ವಿಧಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಿದೆ. ಸಾಮಾಜಿಕ ಪಿಂಚಣಿ ಹೆಚ್ಚಳಹೊಸದನ್ನು ಜಾರಿಗೆ ತರಲು ಹಣವಿಲ್ಲದ ಎಡರಂಗ ಸರ್ಕಾರ ಟರ್ಕಿ-ಸಿರಿಯಾಗೆ 10 ಕೋಟಿ ರೂಪಾಯಿ ಮಂಜೂರು ಮಾಡಲು ಹಣ ಎಲ್ಲಿಂದ ಬಂತು ಎಂಬುದನ್ನು ಸಪಷ್ಟಪಡಿಸಬೇಕು. ಟರ್ಕಿ-ಸಿರಿಯಾಗೆ ಭಾರತ ಸರ್ಕಾರ ಅಗತ್ಯ ಸಹಾಯ ಒದಗಿಸುತ್ತಿರುವ ಮಧ್ಯೆ 10 ಕೋಟಿ ರೂಪಾಯಿಗಳನ್ನು ಹೇಗೆ ನೀಡುತ್ತದೆ ಎಂದು ಪ್ರಶ್ನಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎಂ. ಸಂಜೀವ ಶೆಟ್ಟಿ, ಎಂ. ಸುಧಾಮ ಗೋಸಾಡ, ಎಂ. ಉಮಾ, ಮನುಲಾಲ್ ಮೇಲೋತ್, ಸವಿತಾ ಟೀಚರ್, ಪುಷ್ಪಾ ಗೋಪಾಲನ್, ಸತೀಶ್ಚಂದ್ರ ಭಂಡಾರಿ, ಪ್ರಮಿಳಾ ಸಿ.ನಾಯ್ಕ್, ಅಂಜು ಜೋಸ್ಟಿ, ಅಶ್ವಿನಿ ಎಂ.ಎಲ್ ಮುಂತಾದವರು ಉಪಸ್ಥಿತರಿದ್ದರು. ವಿಜಯ್ ಕುಮಾರ್ ರೈ ಸ್ವಾಗತಿಸಿದರು. ಎ. ವೇಲಾಯುಧನ್ ವಂದಿಸಿದರು.
ತೆರಿಗೆ ಬಾಕಿ ವಸೂಲಿ ಬಿಟ್ಟು ಸೆಸ್ ಮೂಲಕ ಜನಸಾಮಾನ್ಯರನ್ನು ವಂಚಿಸಲು ಮುಂದಾದ ಸರ್ಕಾರ-ಎಂ.ಟಿ ರಮೇಶ್
0
ಫೆಬ್ರವರಿ 10, 2023
Tags