ನವದೆಹಲಿ: ಇನ್ನು ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಹೊಟ್ಟೆ ಹಸಿಯಿತು ಎಂದರೆ ಚಿಂತೆ ಮಾಡಬೇಕಾಗಿಲ್ಲ. ವಾಟ್ಸ್ಆಯಪ್ನಲ್ಲಿ ಒಂದು ಸಂದೇಶ ಕಳಿಸಿದರೆ ಸಾಕು! ನಿಮಗಿಷ್ಟದ ತಿಂಡಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಮುಂದಿರುತ್ತದೆ!
ಭಾರತೀಯ ರೈಲ್ವೆಯ ಪಿಎಸ್‌ಯು, ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ತನ್ನ ಇ-ಕ್ಯಾಟರಿಂಗ್ ಸೇವೆಗಳನ್ನು ಹೆಚ್ಚು ಗ್ರಾಹಕ-ಕೇಂದ್ರಿತಗೊಳಿಸಲು ವಾಟ್ಸಾಪ್ ಮೂಲಕ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೇವೆಗಳನ್ನು ಸೋಮವಾರ ಪರಿಚಯಿಸಿದೆ.
ಈ ಉದ್ದೇಶಕ್ಕಾಗಿ ರೈಲ್ವೆ ಇಲಾಖೆ, ವಾಟ್ಸಾಪ್ ಸಂಖ್ಯೆ +91-8750001323 ಅನ್ನು ಪ್ರಾರಂಭಿಸಿದೆ. ಆಯ್ದ ರೈಲುಗಳು ಮತ್ತು ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೇವೆಗಳಿಗಾಗಿ WhatsApp ಸಂವಹನವನ್ನು ಅಳವಡಿಸಲಾಗಿದ್ದು ಗ್ರಾಹಕರ ಪ್ರತಿಕ್ರಿಯೆ ಮತ್ತು ಸಲಹೆಗಳ ಆಧಾರದ ಮೇಲೆ ರೈಲ್ವೆ ಇಲಾಖೆ, ಇತರ ರೈಲುಗಳಲ್ಲಿಯೂ ಈ ಹೊಸ ಮಾದರಿಯ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಿದೆ.
ರೈಲ್ವೇ ಇಲಾಖೆ, ತನ್ನ ಪತ್ರಿಕಾ ಹೇಳಿಕೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವಾಗ ವಾಟ್ಸ್ಆಯಪ್ ಮೂಲಕ ಆಹಾರವನ್ನು ಹೇಗೆ ಆರ್ಡರ್ ಮಾಡಬಹುದು ಎಂಬ ಪ್ರಕ್ರಿಯೆಯನ್ನು ವಿವರಿಸಿದೆ.
1. ಟಿಕೆಟ್ ಕಾಯ್ದಿರಿಸುವಾಗ, www.ecatering.irctc.co.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಇ-ಕ್ಯಾಟರಿಂಗ್ ಸೇವೆಗಳನ್ನು ಆಯ್ಕೆ ಮಾಡಲು ಇಲಾಖೆಯ WhatsApp ಸಂಖ್ಯೆಯಿಂದ ಗ್ರಾಹಕರಿಗೆ ಸಂದೇಶವನ್ನು ಕಳುಹಿಸಲಾಗುತ್ತದೆ.
2. ವೆಬ್‌ಸೈಟ್‌ಗೆ ಹೋದ ನಂತರ ಗ್ರಾಹಕರು ನೇರವಾಗಿ ವೆಬ್‌ಸೈಟ್‌ನಿಂದ ನಿಲ್ದಾಣಗಳಲ್ಲಿ ಲಭ್ಯವಿರುವ ತಮ್ಮ ಆಯ್ಕೆಯ ರೆಸ್ಟೋರೆಂಟ್‌ಗಳಿಂದ ಊಟವನ್ನು ಬುಕ್ ಮಾಡಬಹುದು.
3. ಇದರ ನಂತರ, WhatsApp ಸಂಖ್ಯೆಯನ್ನು ದ್ವಿಮುಖ ಸಂವಹನ ವೇದಿಕೆಯಾಗಿ ಸಕ್ರಿಯಗೊಳಿಸಲಾಗುತ್ತದೆ. AI ಪವರ್ ಚಾಟ್‌ಬಾಟ್ ಒಂದು, ಪ್ರಯಾಣಿಕರ ಇ-ಕೇಟರಿಂಗ್ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳನ್ನು ನಿರ್ವಹಿಸುತ್ತದೆ.
ಐಆರ್‌ಸಿಟಿಸಿ ಇ-ಕೇಟರಿಂಗ್ ಸೇವೆಗಳ ಮೂಲಕ ಗ್ರಾಹಕರಿಗೆ ದಿನಕ್ಕೆ ಸುಮಾರು 50,000 ಪ್ಲೇಟ್ ಊಟಗಳನ್ನು ನೀಡಲಾಗುತ್ತಿದೆ ಎಂದು ರೈಲ್ವೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷ, ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿರುವ ಜೂಪ್ ಇಂಡಿಯಾ, ರೈಲಿನಲ್ಲಿ ಪ್ರಯಾಣಿಕರಿಗೆ ಆಹಾರವನ್ನು ತಲುಪಿಸಲು WhatsApp ಚಾಟ್‌ಬಾಟ್ ಪರಿಹಾರಗಳ ಪೂರೈಕೆದಾರ ಜಿಯೋ ಹ್ಯಾಪ್ಟಿಕ್ ಟೆಕ್ನಾಲಜೀಸ್ ಲಿಮಿಟೆಡ್‌ನೊಂದಿಗೆ ಪಾಲುದಾರಿಕೆ ಹೊಂದಿತ್ತು.
ಪ್ರಯಾಣಿಕರು ತಮ್ಮ ಪಿಎನ್‌ಆರ್ ಸಂಖ್ಯೆಗಳ ಮೂಲಕ ವಾಟ್ಸಾಪ್-ಆಧಾರಿತ ಆಹಾರ ವಿತರಣಾ ವೇದಿಕೆಯನ್ನು ಆಹಾರ ಆರ್ಡರ್ ಮಾಡಲು ಮತ್ತು ರಿಯಲ್ ಟೈಮ್ ಆರ್ಡರ್ ಟ್ರ್ಯಾಕಿಂಗ್, ಪ್ರತಿಕ್ರಿಯೆ ಮತ್ತು ಬೆಂಬಲದೊಂದಿಗೆ ನೇರವಾಗಿ ತಮ್ಮ ಸೀಟುಗಳಿಗೆ ತಮ್ಮ ಆಹಾರರದ ಡೆಲಿವರಿಯನ್ನು ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.