ನವದೆಹಲಿ: ಘನತೆಯಿಂದ ಜೀವಿಸುವ ಯಾವುದೇ ವ್ಯಕ್ತಿಯ ಹಕ್ಕು ಮೊಟಕುಗೊಳ್ಳುವುದನ್ನು ಯಾವುದೇ ಸಾಂವಿಧಾನಿಕ ನ್ಯಾಯಾಲಯವು ಸಹಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದಾವೂದಿ ಬೊಹ್ರಾ ಸಮುದಾಯದಲ್ಲಿ ಆಚರಣೆಯಲ್ಲಿರುವ 'ಬಹಿಷ್ಕಾರ' ಪದ್ಧತಿಯಿಂದ ಆ ಸಮುದಾಯದ ಜನರಿಗೆ ರಕ್ಷಣೆ ನೀಡಿ 1962ರಲ್ಲಿ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿತ್ತು.
ಈ ತೀರ್ಪನ್ನು ಮರುಪರಿಶೀಲಿಸಲು ಒಂಬತ್ತು ನ್ಯಾಯಮೂರ್ತಿಗಳ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಶಿಫಾರಸು ಮಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಜಯ್ ಕಿಶನ್ ಕೌಲ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಈ ವಿಷಯದ ಬಗ್ಗೆ ವಿವರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
'ಧರ್ಮದ ಆಧಾರದಲ್ಲಿ ಕೆಲಸ ಮಾಡುವ ಧಾರ್ಮಿಕ ಪಂಗಡಗಳ ಹಕ್ಕುಗಳು ಯಾವಾಗಲೂ ನೈತಿಕತೆಯನ್ನು ಒಳಗೊಂಡಿರಬೇಕು. ಧಾರ್ಮಿಕ ಆಚರಣೆಗಳ ನಿರ್ವಹಣೆಗೆ ಸಂಬಂಧಿಸಿದ 26ನೇ (ಬಿ) ವಿಧಿಗಿಂತ ಸಾಂವಿಧಾನಿಕ ನೈತಿಕತೆಯು ಮುಖ್ಯವಾದುದು' ಎಂದು ಕೋರ್ಟ್ ಹೇಳಿತು.
ಬಹಿಷ್ಕಾರಗೊಂಡ ವ್ಯಕ್ತಿಯೊಬ್ಬರು ಸಮುದಾಯಕ್ಕೆ ಸಂಬಂಧಿಸಿದ ಸೊತ್ತುಗಳು ಹಾಗೂ ಸ್ಮಶಾನ ಸ್ಥಳವನ್ನು ಬಳಸುವಂತಿಲ್ಲ ಎಂಬ ವಿಚಾರವನ್ನು ಗಮನಿಸಿದ ಕೋರ್ಟ್, ಈ ಅಭಿಪ್ರಾಯ ವ್ಯಕ್ತಪಡಿಸಿತು.