ನವದೆಹಲಿ: ಅದಾನಿ ಪ್ರಕರಣದ ವಿಚಾರವಾಗಿ ಸರ್ಕಾರದ ಮುಚ್ಚಿದ ಲಕೋಟೆಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಹೂಡಿಕೆದಾರರ ಹಿತಾಸಕ್ತಿ ದೃಷ್ಟಿಯಿಂದ ಸಂಪೂರ್ಣ ಪಾರದರ್ಶಕತೆ ಇರಬೇಕೆಂದು ನ್ಯಾ. ಡಿವೈ ಚಂದ್ರಚೂಡ್ ಹಾಗೂ ನ್ಯಾ. ಪಿಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೇಂದ್ರ ಸರ್ಕಾರ ಷೇರುಮಾರುಕಟ್ಟೆಯ ನಿಯಂತ್ರಣ ಕ್ರಮಗಳನ್ನು ಬಲಪಡಿಸುವ ನಿಟ್ಟಿನಲ್ಲಿ ತಜ್ಞರ ಸಮಿತಿಯ ಪ್ರಸ್ತಾವನೆ ಕುರಿತ ಸಲಹೆಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಮುಂದಾಗಿತ್ತು. ಆದರೆ ಕೋರ್ಟ್ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದೆ.
ಅದಾನಿ ಷೇರುಗಳ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಅಸ್ಥಿರತೆಯಿಂದ ಹೂಡಿಕೆದಾರರ ಹಿತಾಸಕ್ತಿ ಕಾಪಾಡಲು ನಿಯಂತ್ರಕ ಕಾರ್ಯವಿಧಾನವನ್ನು ಬಲಪಡಿಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ಡೊಮೇನ್ ತಜ್ಞರ ಸಮಿತಿಯನ್ನು ರಚಿಸುವ ಸಲಹೆಯನ್ನು ಪರಿಗಣಿಸಬೇಕು ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಫೆ.10 ರಂದು ಹೇಳಿತ್ತು.
ಅದಾನಿ ಷೇರುಗಳ ವಿಷಯವಾಗಿ ಈ ವರೆಗೂ ಸುಪ್ರೀಂ ಕೋರ್ಟ್ ನಲ್ಲಿ ಕಾಂಗ್ರೆಸ್ ನಾಯಕ ಜಯ ಠಾಕೂರ್ ಸೇರಿದಂತೆ ನಾಲ್ವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.ಅಮೇರಿಕಾ ಮೂಲದ ಶಾರ್ಟ್ ಸೆಲ್ಲರ್ ಹಿಂಡನ್ಬರ್ಗ್ ಸಂಶೋಧನಾ ವರದಿಯ ನಂತರ ಅದಾನಿ ಷೇರುಗಳು ತೀವ್ರ ಕುಸಿತ ಕಂಡಿದ್ದವು.