ನವದೆಹಲಿ :ಭಾರತಕ್ಕೆ ನಾಲ್ಕು ದಿನಗಳ ಭೇಟಿಯ ಭಾಗವಾಗಿ ರವಿವಾರ ಡೆನ್ಮಾರ್ಕ್‌ನ ರಾಜಕುಮಾರ (Danish Crown Prince) ಫ್ರೆಡರಿಕ್ ಆಯಂಡ್ರೆ ಹೆನ್ರಿಕ್ ಕ್ರಿಶ್ಚಿಯನ್ ಹಾಗೂ ರಾಜಕುಮಾರಿ ಮೇರಿ ಎಲಿಝಬೆತ್ ದಿಲ್ಲಿಗೆ ಬಂದಿಳಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಡೆನ್ಮಾರ್ಕ್ ರಾಜ ಮನೆತನದವರು (Royal Family) ಭಾರತಕ್ಕೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಆಮಂತ್ರಣದ ಮೇರೆಗೆ ಅವರಿಬ್ಬರೂ ಭಾರತಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಅವರ ಭೇಟಿಯಿಂದ ಎರಡು ರಾಷ್ಟ್ರಗಳ ನಡುವಿನ ನಿಕಟ ಬಾಂಧವ್ಯ ಮತ್ತಷ್ಟು ಬಲಿಷ್ಠವಾಗಿ ವೃದ್ಧಿಯಾಗಲಿದೆ" ಎಂದು ಆಶಿಸಿದ್ದಾರೆ.
ರಾಜ ಮನೆತನದ ದಂಪತಿಗಳು ಆಗ್ರಾ ಹಾಗೂ ಚೆನ್ನೈಗೂ ಪ್ರಯಾಣಿಸಲಿದ್ದಾರೆ. ನಂತರ ಚೆನ್ನೈನಿಂದ ಮಾರ್ಚ್ 2ರಂದು ನಿರ್ಗಮಿಸಲಿದ್ದಾರೆ. ರಾಜ ಮನೆತನದ ದಂಪತಿಗಳೊಂದಿಗೆ ವಿದೇಶಾಂಗ ಸಚಿವ ಲಾರ್ಸ್ ಲೊಕ್ಕೆ ರಾಸ್ಮುಸೆನ್, ಪರಿಸರ ಸಚಿವ ಮ್ಯಾಗ್ನಸ್ ಹ್ಯೂನಿಕ್ ಮತ್ತು ತಾಪಮಾನ, ಇಂಧನ ಹಾಗೂ ಸಂಪನ್ಮೂಲಗಳ ಸಚಿವ ಲಾರ್ಸ್ ಆಗಾರ್ಡ್ ಜೊತೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಂಗಳವಾರ ಪ್ರಕಟಣೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, "ಭೇಟಿಯ ಸಂದರ್ಭದಲ್ಲಿ ರಾಜ ಮನೆತನದ ದಂಪತಿಗಳು ಉಪ ರಾಷ್ಟ್ರಪತಿಯವರನ್ನು ಭೇಟಿಯಾಗಲಿದ್ದಾರೆ ಮತ್ತು ಸಿಐಐ ಆಯೋಜಿಸಿರುವ "ಭಾರತ-ಡೆನ್ಮಾರ್ಕ್: ಹಸಿರು ಮತ್ತು ಸುಸ್ಥಿರ ಪ್ರಗತಿಯ ಪಾಲುದಾರರು" ಎಂಬ ಮುಕ್ತ ಸಂವಾದವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿಯಾಗಲಿದ್ದಾರೆ" ಎಂದು ತಿಳಿಸಿದೆ.