ನವದೆಹಲಿ: 'ಆನ್‌ಲೈನ್ ಗೇಮ್, ಜೂಜನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಕೇಂದ್ರದ ಕಾನೂನು ರೂಪಿಸುವುದು ಅಗತ್ಯ' ಎಂದು ಕೇಂದ್ರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಪಾದಿಸಿದ್ದಾರೆ.
ಈ ವಿಷಯವು ಸದ್ಯ ರಾಜ್ಯಗಳ ವ್ಯಾಪ್ತಿಗೆ ಬರಲಿದೆ. ಹಲವು ರಾಜ್ಯಗಳು ಕಾಯ್ದೆ ರೂಪಿಸಿವೆ. ಆದರೆ, ಡಿಜಿಟಲ್ ಜಗತ್ತಿನ ಈಗಿನ ಸಂದರ್ಭದಲ್ಲಿ ಕಡಿವಾಣ ಕುರಿತಂತೆ ರಾಜ್ಯಗಳ ಗಡಿಯ ಮಿತಿ ಹಾಕಿಕೊಳ್ಳುವುದು ಸಲ್ಲದು ಎಂದು ಸಚಿವರು ಪ್ರತಿಪಾದಿಸಿದರು.
ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೇಂದ್ರದ ಕಾಯ್ದೆ ರೂಪಿಸುವ ನಿಟ್ಟಿನಲ್ಲಿ ರಾಜ್ಯಗಳು ಹಾಗೂ ರಾಜಕೀಯ ಪಕ್ಷಗಳ ನಡುವೆ ಸಹಮತ ಮೂಡುವುದು ಅಗತ್ಯವಾಗಿದೆ ಎಂದರು.
ಸದ್ಯ 19 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಕಾಯ್ದೆ ರೂಪಿಸಿವೆ. 17 ರಾಜ್ಯಗಳು ಆನ್‌ಲೈನ್ ಗೇಮಿಂಗ್ ಅನ್ನು ತನ್ನ ವ್ಯಾಪ್ತಿಗೆ ತರಲು ಕಾಯ್ದೆಗೆ ತಿದ್ದುಪಡಿ ತಂದಿವೆ. ಆದರೆ, ಡಿಜಿಟಲ್ ಕಾಲಘಟ್ಟದಲ್ಲಿ ಈ ವಿಷಯದಲ್ಲಿ ರಾಜ್ಯಗಳ ಗಡಿ ಹಾಕಿಕೊಳ್ಳುವುದು ದುರದೃಷ್ಟಕರ ಎಂದು ಸಚಿವರು ಹೇಳಿದರು.
ಸಮಾಜದ ಮೇಲೆ ಆನ್‌ಲೈನ್ ಗೇಮಿಂಗ್ ಪರಿಣಾಮವನ್ನು ಕೇಂದ್ರ ಗಂಭೀರವಾಗಿ ಗಮನಿಸುತ್ತಿದೆ. ಈ ಸ್ಥಿತಿಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ನಿಯಂತ್ರಣಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ ಎಂದೂ ಅಭಿಪ್ರಾಯಪಟ್ಟರು.