ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಸಮಗ್ರ ಶಿಕ್ಷಾ ಕೇರಳ ವತಿಯಿಂದ ಕಲಿಕಾ ಮಟ್ಟವನ್ನು ಉನ್ನತೀಕರಿಸುವ "ಇಲಾ" (ಎನ್ ಹಾನ್ಸಿಂಗ್ ಲರ್ನಿಂಗ್ ಅಂಬಿಯನ್ಸ್) ಕಲಿಕಾ ಅನುಭವ ನೀಡುವ ವಿಶೇಷ ಕಾರ್ಯಗಾರ ನಡೆಯಿತು.
ನಾಲ್ಕನೇ ತರಗತಿಯ ಮಕ್ಕಳಿಗೆ ಗಣಿತ ಕಲಿಕೆಯನ್ನು ರಸವತ್ತುಗೊಳಿಸುವ ಕಲಿಕೋಪಕರಣಗಳ ತಯಾರಿ ಚಟುವಟಿಕೆ, 7ನೇ ತರಗತಿ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಕಲಿಕೆಗೆ ಸಹಾಯಕಾರಿಯಾಗುವ ಕಲಿಕೋಪಕರಣಗಳ ಪ್ರಾತ್ಯಕ್ಷಿಕೆಯ ಜೊತೆಗೆ ಸ್ವ ಅನುಭವ ಕಲಿಕೆಗೆ ಅವಕಾಶ ಒದಗಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ.ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಪಿ.ಕೆ. ಸಮಾಜ ವಿಜ್ಞಾನ ಕಲಿಕಾ ಕಿಟ್ ಮುಖ್ಯ ಶಿಕ್ಷಕಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬದಿಯಡ್ಕ ಬಿಆರ್.ಸಿ ಸಂಯೋಜಕ ಪ್ರಶಾಂತ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ "ಇಲಾ" ಯೋಜನೆಯ ಉದ್ದೇಶದ ಬಗ್ಗೆ ತಿಳಿಸಿದರು.
ಶಾಲಾ ಹಳೆ ವಿದ್ಯಾರ್ಥಿನಿ ನವ್ಯಶ್ರೀ ಸ್ವರ್ಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅನುಭವ ಹಂಚಿಕೊಂಡರು. ಶಿಕ್ಷಕ ಪದ್ಮನಾಭ ಆರ್. ಸ್ವಾಗತಿಸಿ, ಶಿಕ್ಷಕ ಮಂಜುನಾಥ ಭಟ್ ವಂದಿಸಿದರು. 4ನೇ ತರಗತಿ ವಿದ್ಯಾರ್ಥಿಗಳಾದ ಯಶಿತಾಪಿ.ಜಿ ಮತ್ತು ಸಮೃದ್ಧ ಬಿ.ಆರ್.ನಿರೂಪಿಸಿದರು. ಹೆತ್ತವರ ಪರವಾಗಿ ದುರ್ಗಾದೇವಿ ಸ್ವರ್ಗ ಮತ್ತು ವನಿತಾ ಪಡ್ಪು ಭಾಗವಹಿಸಿ ಸಹಕರಿಸಿದರು. 4 ಮತ್ತು 7ನೇ ತರಗತಿ ಶಿಕ್ಷಕರು ನೇತೃತ್ವ ವಹಿಸಿದರು.