ಮುಂಬೈ: 'ಎಲ್ಗಾರ್ ಪರಿಷತ್- ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರು ಅಮೆರಿಕದಲ್ಲಿ ಬಂಧಿತರಾಗಿರುವ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ನೊಂದಿಗೆ ಸಂಪರ್ಕ ಹೊಂದಿದ್ದರು' ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಆರೋಪಿಸಿದ್ದು, ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ನೀಡಬಾರದು ಎಂದು ಹೇಳಿದೆ.
ನವಲಖಾ ಅವರು ಬಾಂಬೆ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು, ಇದಕ್ಕೆ ಪ್ರತಿಕ್ರಿಯೆಯಾಗಿ ಎನ್‌ಐಎ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ (ಅಫಿಡವಿಟ್), 'ರಾಷ್ಟ್ರೀಯ ಭದ್ರತೆ, ಏಕತೆ ಮತ್ತು ಸಾರ್ವಭೌಮತ್ವದ ಮೇಲೆ ನೇರ ಪರಿಣಾಮ ಬೀರುವ ಕೃತ್ಯಗಳನ್ನು ಗೌತಮ್ ಎಸಗಿದ್ದಾರೆ' ಎಂದೂ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ಪಿ.ಡಿ. ನಾಯಕ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠಕ್ಕೆ ನವಲಖಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ, ಪ್ರತಿಕ್ರಿಯೆ ಸಲ್ಲಿಸಿರುವುದಾಗಿ ಎನ್‌ಐಎ ಪರ ವಕೀಲ ಸಂದೇಶ್ ಪಾಟೀಲ್ ಸೋಮವಾರ ತಿಳಿಸಿದ್ದಾರೆ.
ನ್ಯಾಯಪೀಠವು ಫೆ. 27ರಂದು ವಾದವನ್ನು ಆಲಿಸುವುದಾಗಿ ತಿಳಿಸಿದೆ.
'ಗುಲಾಂ ನಬಿ ಫೈ ಆಯೋಜಿಸಿದ್ದ ಕಾಶ್ಮೀರಿ ಅಮೆರಿಕನ್ ಕೌನ್ಸಿಲ್ ಕಾನ್ಫರೆನ್ಸ್‌ನಲ್ಲಿ ಮಾತನಾಡಲು ನವಲಖಾ ಮೂರು ಅಮೆರಿಕಕ್ಕೆ ಭೇಟಿ ನೀಡಿದ್ದರು. ಗುಲಾಂ ಜತೆಗೆ ನವಲಖಾ ನಿರಂತರ ಸಂಪರ್ಕದಲ್ಲಿದ್ದರು' ಎಂದು ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಪ್ರತಿಪಾದಿಸಿದೆ.
'ಐಎಸ್‌ಐ ಮತ್ತು ಪಾಕಿಸ್ತಾನ ಸರ್ಕಾರದಿಂದ ಹಣ ಸ್ವೀಕರಿಸಿದ್ದಕ್ಕಾಗಿ 2011ರ ಜುಲೈನಲ್ಲಿ ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ, ಗುಲಾಂ ನಬಿ ಅವರನ್ನು ಬಂಧಿಸಿತ್ತು. ಈ ಪ್ರಕರಣದಲ್ಲಿ ಗುಲಾಂ ಅವರಿಗೆ ಕ್ಷಮಾದಾನ ನೀಡುವಂತೆ ಅಮೆರಿಕ ನ್ಯಾಯಾಲಯದ ನ್ಯಾಯಾಧೀಶರಿಗೆ ನವಲಖಾ ಪತ್ರ ಬರೆದಿದ್ದರು. ಅಷ್ಟೇ ಅಲ್ಲ, ಪಾಕಿಸ್ತಾನದ ಐಎಸ್‌ಐ ಜನರಲ್‌ಗೆ ನವಲಖಾ ಅವರನ್ನು ಗುಲಾಂ ಪರಿಚಯ ಮಾಡಿಕೊಟ್ಟಿದ್ದರು' ಎಂದೂ ಎನ್‌ಐಎ ಹೇಳಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಗೌತಮ್ ನವಲಖಾ ಅವರು ಸದ್ಯಕ್ಕೆ ಗೃಹಬಂಧನದಲ್ಲಿದ್ದಾರೆ.