ನವದೆಹಲಿ: ಅಗ್ನಿವೀರರ ನೇಮಕಾತಿಗೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಇ) ಈ ಬಾರಿ ಆನ್‌ಲೈನ್‌ನಲ್ಲಿ ನಡೆಸಲಾಗುವುದು. ಅದರ ಹೊರತಾಗಿ ಪಠ್ಯ ಮತ್ತು ಪರೀಕ್ಷಾ ವಿಧಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಭಾರತೀಯ ಸೇನೆ ನೇಮಕಾತಿಯ ಪ್ರಧಾನ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ಎನ್.ಎಸ್. ಸರ್ನಾ ಗುರುವಾರ ತಿಳಿಸಿದರು.
ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಲು ಸಾಕಷ್ಟು ಕಾರಣಗಳಿವೆ. ಯುವಕರಿಗೆ ತಂತ್ರಜ್ಞಾನ ಬಗ್ಗೆ ಹೆಚ್ಚು ತಿಳಿವಳಿಕೆ ಇದೆ. ಹಳ್ಳಿಗಳಿಗೂ ಮೊಬೈಲ್ ಫೋನ್‌ಗಳು ತಲುಪಿವೆ. ಇದರಿಂದ ಜನರಿಗೆ ಹೊಸ ತಂತ್ರಜ್ಞಾನದ ಅರಿವಿದೆ ಎಂದರು.
ಅಗ್ನಿವೀರ ನೇಮಕಾತಿ ಪ್ರಕ್ರಿಯೆಯನ್ನು ಬದಲಿಸಿರುವುದಾಗಿ ಇತ್ತೀಚೆಗಷ್ಟೇ ಸೇನೆ ತಿಳಿಸಿತ್ತು. ಹೊಸ ನೇಮಕಾತಿ ನಿಯಮದ ಪ್ರಕಾರ ಅಭ್ಯರ್ಥಿಗಳು ಮೊದಲಿಗೆ ಆನ್‌ಲೈನ್ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆ ಬಳಿಕ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಯಲಿವೆ.
ಈ ಕುರಿತು ಮಾತನಾಡಿದ ಸರ್ನಾ ಅವರು, ನೇಮಕಾತಿ ಪ್ರಕ್ರಿಯೆಯು ಈಗ ಸುಲಭ, ಸರಳ ಮತ್ತು ವ್ಯವಸ್ಥಿತಗೊಂಡಿದೆ ಎಂದರು.