ಗಾಜಿಯಾಬಾದ್: ನವದೆಹಲಿಯ ಹೊರವಲಯದಲ್ಲಿರುವ ಗಾಜಿಯಾಬಾದ್ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಚಿರತೆ, ಐವರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಕನಿಷ್ಠ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ ಗಾಜಿಯಾಬಾದ್ ಕೋರ್ಟ್‌ನ ಹಳೆಯ ಕಟ್ಟಡದ ಬಳಿಯಿದ್ದ ವಕೀಲ, ಶೂ ಪಾಲೀಶ್ ಮಾಡುತ್ತಿದ್ದ ವ್ಯಕ್ತಿ ಹಾಗೂ ಪೊಲೀಸರ ಮೇಲೆ ಚಿರತೆ ದಾಳಿ ಮಾಡಿದೆ. ಶೂ ಪಾಲಿಶ್ ಮಾಡುತ್ತಿದ್ದ ವ್ಯಕ್ತಿಯ ಕಿವಿಯನ್ನು ಚಿರತೆ ಹರಿದು ಹಾಕಿದೆ. ಆತ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುಮಾರು ಅರ್ಧ ಗಂಟೆಯ ನಂತರ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸರು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
"ಚಿರತೆ ಭಯಭೀತವಾಗಿ ನ್ಯಾಯಾಲಯದ ಸಂಕೀರ್ಣದಲ್ಲಿ ಜಿಗಿದಿದೆ. ಜನರ ಓಡಾಟವನ್ನು ನೋಡಿ ಇನ್ನಷ್ಟು ಆಕ್ರಮಣಕ್ಕೆ ಇಳಿಯಿತು. ಘಟನೆಯಲ್ಲಿ ಐದರಿಂದ ಆರು ಜನ ಗಾಯಗೊಂಡಿದ್ದಾರೆ" ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.