ಆಂಬಾಸಾ : ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಏರ್ಪಟ್ಟಿರುವ ತ್ರಿವಳಿ ಸ್ಪರ್ಧೆಯಲ್ಲಿ ಯಾವ ಪಕ್ಷ ಅಥವಾ ಮೈತ್ರಿಕೂಟವೂ ಬಹುಮತ ಪಡೆಯದಿದ್ದರೆ ಸರ್ಕಾರ ರಚಿಸಲು ಟಿಪ್ರಮೋಥಾ ಹಕ್ಕು ಮಂಡಿಸಲಿದೆ ಎಂದು ಪಕ್ಷದ ಅಧ್ಯಕ್ಷ ಬಿಜೋಯ್ ಕುಮಾರ್ ಹ್ರಂಗ್ಕಾವ್ಲ್ ಹೇಳಿದರು.
'ನಮ್ಮ ಪಕ್ಷವೇ ರಾಜ್ಯದಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯೂ ಇದೆ. ಚುನಾವಣೆ ಬಳಿಕ ಬುಡಕಟ್ಟು ಜನಾಂಗಕ್ಕಾಗಿ ಪ್ರತ್ಯೇಕ ರಾಜ್ಯ ರಚಿಸಲು ಅಧಿಕೃತ ಒಪ್ಪಂದ ಮಾಡಿಕೊಳ್ಳುವ ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು ಬಾಹ್ಯ ಬೆಂಬಲ ನೀಡಲು ನಾವು ತಯಾರಿದ್ದೇವೆ. ಈ ಒಪ್ಪಂದಕ್ಕೆ ಯಾವ ಪಕ್ಷವೂ ಒಪ್ಪಿಗೆ ನೀಡದಿದ್ದರೆ ಬೆಂಬಲ ನೀಡುವ ವಿಚಾರದಲ್ಲಿ ನಾವು ಮುಂದುವರಿಯುವುದಿಲ್ಲ' ಎಂದು ಅವರು ಹೇಳಿದರು.
'ಬಿಜೆಪಿ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುಲು ನಾವು ಪ್ರಯತ್ನಿಸಿದೆವು. ಈ ಸಂಬಂಧ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಇಬ್ಬರು ದೆಹಲಿ ನಾಯಕರ ಜೊತೆ ಗುವಾಹಟಿಯಲ್ಲಿ ಮಾತುಕತೆ ನಡೆಸಲಾಯಿತು. ಆದರೆ ಅವರು ಒಪ್ಪಂದಕ್ಕೆ ಸಿದ್ಧರಿಲ್ಲದ ಕಾರಣ ಈ ಸಭೆ ಫಲ ನೀಡಲಿಲ್ಲ' ಎಂದರು.
ಇದೇ ವೇಳೆ, ಪಕ್ಷಾಂತರ ಪ್ರಕ್ರಿಯೆ ವಿಚಾರವನ್ನು ಒಪ್ಪಿಕೊಂಡ ಅವರು, 'ಕುದುರೆ ವ್ಯಾಪಾರದ ಈ ವ್ಯವಸ್ಥೆಯಲ್ಲಿ ಕೆಲ ಅಭ್ಯರ್ಥಿಗಳು ಮನಸ್ಸು ಬದಲಾಯಿಸುವುದಿಲ್ಲ ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ. ನಮ್ಮ ತಂಡದಲ್ಲಿ ಮನಸ್ಸು ಬದಲಿಸಿದರೆ ಅವರ ಸ್ನೇಹಿತರು ಮತ್ತೆ ಅವರನ್ನು ಪಕ್ಷದೆಡೆ ಕರೆತರುತ್ತಾರೆ' ಎಂದರು.
ಎಡಪಕ್ಷ ಮೈತ್ರಿಕೂಟಕ್ಕೆ ಬಹುಮತ?: ಎಡಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟ ಈ ಬಾರಿ ತ್ರಿಪುರಾದಲ್ಲಿ ಬಹುಮತ ಪಡೆಯಲಿದೆ. ಬುಡಕಟ್ಟು ಪ್ರದೇಶಗಳಲ್ಲಿ ಟಿಪ್ರಮೋಥಾ ಹೆಚ್ಚಿನ ಬೆಂಬಲ ಪಡೆಯಲಿದೆ ಮತ್ತು ಇದು ಬಿಜೆಪಿಗೆ ಮುಳುವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೇರಿತ್ತು. ಅದರಲ್ಲಿ ಅರ್ಧದಷ್ಟು ಸ್ಥಾನಗಳನ್ನು ಬುಡಕಟ್ಟು ಪ್ರದೇಶಗಳಲ್ಲಿ ಗೆದ್ದಿತ್ತು. ಟಿಪ್ರಮೋಥಾ ಸ್ಪರ್ಧೆಯಿಂದ ಈ ಬಾರಿ ಬಿಜೆಪಿಗೆ ಹಿನ್ನೆಡೆಯಾಗಲಿದೆ ಎನ್ನಲಾಗಿದೆ.
60 ಸ್ಥಾನಗಳಿಗೆ ನಡೆಯಲಿರುವ ತ್ರಿಪುರಾ ವಿಧಾನಸಭೆ ಚುನಾವಣೆಯು ಗುರುವಾರ ನಡೆಯಲಿದೆ.
'ಸಿಪಿಎಂ-ಕಾಂಗ್ರೆಸ್ ಮೈತ್ರಿಯಿಂದ ಮೋದಿಗೆ ತಳಮಳ'
ಸಂತಿರ್‌ಬಜಾರ್ : ತ್ರಿಪುರಾದಲ್ಲಿ ಸಿಪಿಎಂ ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಟ್ಟಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ತಳಮಳಗೊಂಡಿದ್ದಾರೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿಪಿಎಂ ನಾಯಕ ಮಾಣಿಕ್ ಸರ್ಕಾರ್ ಹೇಳಿದ್ದಾರೆ.
ಫೆಬ್ರುವರಿ 11ರಂದು ತ್ರಿಪುರಾದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ್ದ ಮೋದಿ, ಸಿಪಿಎಂ-ಕಾಂಗ್ರೆಸ್ ಮೈತ್ರಿಯನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸರ್ಕಾರ್, ಮೋದಿ ಅವರು ಹೇಳಿದಂತೆ, ಕೇರಳದಲ್ಲಿ ಸಿಪಿಎಂ ನೇತೃತ್ವದ ಸರ್ಕಾರವಿದೆ ಮತ್ತು ಕಾಂಗ್ರೆಸ್ ವಿರೋಧ ಪಕ್ಷವಾಗಿದೆ. ತ್ರಿಪುರಾಲ್ಲಿ ಪರಸ್ಪರ ಮೈತ್ರಿ ಮಾಡಿಕೊಂಡಿವೆ. ಆದರೆ, ಕೇರಳದಲ್ಲಿ ಪ್ರಜಾಪ್ರಭುತ್ವ ದೃಢವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ತ್ರಿಪುರಾದಲ್ಲಿ ಸಂವಿಧಾನ ಪಾಲನೆಯಾಗಲು ಅನುವು ಮಾಡುತ್ತಿಲ್ಲ. ಇಲ್ಲಿ ನಿರಂಕುಶ ಪ್ರಭುತ್ವ ಜಾರಿಯಲ್ಲಿದೆ. ಇದನ್ನು ಕೊನೆಗಾಣಿಸಲು ನಾವು ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.
ಬಂದೂಕಿನಿಂದ ಪ್ರಜಾಪ್ರಭುತ್ವದೆಡೆಗೆ...
ಈ ಬಾರಿಯ ತ್ರಿಪುರಾ ವಿಧಾನಸಭೆ ಚುನವಣೆಯಲ್ಲಿ 'ಕಿಂಗ್ ಮೇಕರ್' ಆಗಲಿದ್ದಾರೆ ಎನ್ನಲಾಗಿರುವ ಬಿಜೋಯ್ ಕುಮಾರ್ ಹ್ರಂಗ್ಕಾವ್ಲ್ (76) ಅವರು 1988ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಜೊತೆ 'ತ್ರಿಪುರಾ ಶಾಂತಿ ಒಪ್ಪಂದ'ಕ್ಕೆ ಸಹಿ ಹಾಕುವವರೆಗೂ ರಾಜ್ಯದ ಬುಡಕಟ್ಟು ಜನಾಂಗದ ಪ್ರಮುಖ ಬಂಡುಕೋರ ನಾಯಕರಾಗಿದ್ದವರು.
ಒಪ್ಪಂದದ ಬಳಿಕ ಬಂದೂಕನ್ನು ಪಕ್ಕಕ್ಕಿಟ್ಟಿರುವ ಅವರು, ತಮ್ಮ ಕನಸಿನ ಟಿಪ್ರಲ್ಯಾಂಡ್ (ಬುಡಕಟ್ಟು ಜನಾಂಗಕ್ಕಾಗಿ ಪ್ರತ್ಯೇಕ ರಾಜ್ಯ) ಸ್ಥಾಪಿಸಲು ಬಂದೂಕು ಹಿಡಿಯುವುದು ಸರಿಯಾದ ಮಾರ್ಗವಲ್ಲ. ಅದಕ್ಕಾಗಿ ಪ್ರಜಾಪ್ರಭುತ್ವದವೇ ಸರಿಯಾದ ಮಾರ್ಗ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಪ್ರತ್ಯೇಕ ರಾಜ್ಯದ ಬೇಡಿಕೆಗೆ ಸಾಂವಿಧಾನಾತ್ಮ ಪರಿಹಾರವೇ ಉತ್ತಮ. ಬಂದೂಕು ಹಿಡಿದಿದ್ದರಿಂದ ಆ ಕನಸು ಸಾಕಾರವಾಗಲು ವಿಳಂಬವಾಯಿತು ಎಂದು ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ.
ಶಾಂತಿ ಒಪ್ಪಂದದ ಬಳಿಕ ಬಿಜೋಯ್ ಕುಮಾರ್ ಅವರು ಟ್ವಿಪ್ರ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಎರಡು ವರ್ಷಗಳ ಹಿಂದೆ ಪ್ರಾದೇಶಿಕ ಪಕ್ಷವಾದ ಟಿಪ್ರಮೋಥಾ ಜೊತೆ ಈ ಪಕ್ಷವನ್ನು ವಿಲೀನ ಮಾಡಲಾಯಿತು. ಟಿಪ್ರಲ್ಯಾಂಡ್ ಸ್ಥಾಪಿಸುವುದನ್ನೇ ಪ್ರಮುಖ ಚುನಾವಣಾ ಅಂಶವನ್ನಾಗಿ ಮಾಡಿಕೊಂಡಿರುವ ಟಿಪ್ರಮೋಥಾ, ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚಿನ ಜನ ಬೆಂಬಲ ಪಡೆಯುತ್ತಿದೆ.
ಬಿಜೆಪಿಗೆ ಬಹುಮತ ಖಚಿತ: ಮಾಣಿಕ್ ಸಾಹಾ
ಅಗರ್ತಲಾ: ತ್ರಿಪುರಾದಲ್ಲಿ ಬಿಜೆಪಿಯು ಬಹುಮತ ಪಡೆದು ಸರ್ಕಾರ ರಚಿಸಲಿದೆ. ಚುನಾವಣೆ ಬಳಿಕ ರಾಜ್ಯದಲ್ಲಿ ಬಹುಶಃ ವಿರೋಧ ಪಕ್ಷವೇ ಇರುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸಾಹಾ ಮಂಗಳವಾರ ಹೇಳಿದ್ದಾರೆ.
ಬಿಜೆಪಿಯು ತ್ರಿಪುರಾದಲ್ಲಿ ಗಳಿಸುವ ಭಾರಿ ಜಯವು ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಪಕ್ಷಕ್ಕೆ 'ಮಾದರಿ'ಯಾಗಲಿದೆ. ಸೋಲಿನತ್ತ ಮುಖಮಾಡಿದ್ದೇವೆ ಎಂದು ತಿಳಿದು ಸಿಪಿಎಂ-ಕಾಂಗ್ರೆಸ್ ಮೈತ್ರಿಕೂಟ ಹತಾಶೆಗೊಳಗಾಗಿದೆ ಎಂದು ಅವರು ಹೇಳಿದರು.