ನವದೆಹಲಿ: ಅದಾನಿ ಸಮೂಹ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಹಸಿರು ಮತ್ತು ಶುದ್ಧ ಇಂಧನ ವಲಯಕ್ಕೆ ಬಜೆಟ್ ನಲ್ಲಿ ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಅಲ್ಲಗಳೆದಿದ್ದಾರೆ. ಬಾವ- ಬಾಮೈದ (ಜಿಜಾಸ್- ಭಾತಿಜಾಸ್ ) ಅವರಿಗೆ ಲಾಭ ಮಾಡಿಕೊಡುವುದು ಕಾಂಗ್ರೆಸ್ ಸಂಸ್ಕೃತಿ, ಆದರೆ, ಅದು ಮೋದಿ ಸರ್ಕಾರದಲ್ಲ ಎಂದಿದ್ದಾರೆ.
ಇತ್ತೀಚಿಗೆ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್, ಶುದ್ಧ ಇಂಧನ ವಲಯಕ್ಕೆ ರೂ.35,000 ಕೋಟಿ ಅನುದಾನ ಹಂಚಿಕೆ ಮಾಡಿದ್ದರು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬೃಹತ್ ಯೋಜನೆಗಳನ್ನು ಅದಾನಿ ಗ್ರೂಪ್ ಘೋಷಿಸಿದ ಸಂದರ್ಭದಲ್ಲಿ ಬಜೆಟ್ ನಲ್ಲಿ 'ಹಸಿರು ಬಜೆಟ್' ಎಂಬ ಶೀರ್ಷಿಕೆಯಡಿ ಅನುದಾನ ನೀಡಲಾಗಿದೆ. ಅದಾನಿ ಸಮೂಹ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯಲ್ಲಿ ಇಂತಹ ಆರೋಪಗಳಿಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ನಿರ್ದಿಷ್ಟವಾಗಿ ಯಾರನ್ನೊ ಗಮನದಲ್ಲಿಟ್ಟುಕೊಂಡು ಯಾವುದೇ ಅನುದಾನ ನೀಡಿಲ್ಲ, ಸರ್ಕಾರ ದೇಶವನ್ನು, ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಅನುದಾನ ಹಂಚಿಕೆ ಮಾಡಿದೆ. ಇಂತಹ ಆರೋಪಗಳು ಸಂಪೂರ್ಣವಾಗಿ ತಪ್ಪು ಎಂದರು.
ಕಾಂಗ್ರೆಸ್ ಹೆಸರು ಉಲ್ಲೇಖಿಸದೆ ಕೆಲವು ಜನರಿಗೆ ಅನುಕೂಲವಾಗುವಂತೆ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಫೋನ್ ಕರೆಗಳನ್ನು ಮಾಡಿದ ಸಂದರ್ಭಗಳಿವೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್, ಒಂದು ವೇಳೆ ತಮ್ಮ ಬಾವ- ಬಾಮೈದರಿಗೆ (ಜಿಜಾಸ್- ಭಾತಿಜಾಸ್) ಅನುಕೂಲವಾಗುವಂತೆ ಫೋನ್ ಕರೆ ಮಾಡುವುದು ಅವರ ಸಂಸ್ಕೃತಿ ಎಂದು ನಿರ್ಮಲಾ ಸೀತಾರಾಮನ್ ಗಾಂಧಿ ಕುಟುಂಬವನ್ನು ಕೆಣಕಿದರು.
ಪ್ರಧಾನಿ ಮೋದಿಯವರ ಅವರ ನಾಯಕತ್ವದಡಿ, ಈ ರೀತಿಯಲ್ಲಿ ನಾವು ಯಾರೂ ಕೂಡಾ ಮಾಡುತ್ತಿಲ್ಲ. ನಾವು ಯಾರೂ ಅದನ್ನು ಮಾಡುತ್ತಿಲ್ಲ. ಆದ್ದರಿಂದ, ಅಂತಹ ಯಾವುದೇ ಆರೋಪವನ್ನು ಅದೇ ಭಾಷೆಯಲ್ಲಿ ಹಿಂತಿರುಗಿಸಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು. ಯುಪಿಎ ಆಡಳಿತದಲ್ಲಿ (2004-2014) ಕಾಂಗ್ರೆಸ್ ಪಕ್ಷದ ನಾಯಕತ್ವದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಬ್ಯಾಂಕ್ ಸಾಲ ನೀಡಲು ಆಡಳಿತ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳಿವೆ. ಇಂತಹ ಆರೋಪಗಳನ್ನು ಕಾಂಗ್ರೆಸ್ ಪಕ್ಷ ತಳ್ಳಿ ಹಾಕಿದೆ.