ಜೈಪುರ: ಇಲ್ಲಿನ ಆಸ್ಪತ್ರೆಯೊಂದರಲ್ಲಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿದ್ದ ತಿಂಗಳ ಮಗುವನ್ನು ಬೀದಿನಾಯಿಯೊಂದು ಎತ್ತೊಯ್ದು ಕಚ್ಚಿ ಕೊಂದು ಹಾಕಿರುವ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯ ವಾರ್ಡ್‌ನ ಹೊರಗೆ ಶವ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ ಎರಡು ನಾಯಿಗಳು ಆಸ್ಪತ್ರೆಯ ಟಿಬಿ ವಾರ್ಡ್‌ನೊಳಗೆ ಹೋದವು ಮತ್ತು ಅವುಗಳಲ್ಲಿ ಒಂದು ಶಿಶುವಿನೊಂದಿಗೆ ಹಿಂದಿರುಗಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊತ್ವಾಲಿ ಎಸ್‌ಎಚ್‌ಒ ಸೀತಾರಾಮ್ ಮಾತನಾಡಿ, ಮಗುವಿನ ತಂದೆಯನ್ನು ಕ್ಷಯರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನ ಇತರ ಮಕ್ಕಳೊಂದಿಗೆ ರೋಗಿಯನ್ನು ನೋಡಿಕೊಳ್ಳುತ್ತಿದ್ದ ಮಗುವಿನ ತಾಯಿ ರಾತ್ರಿ ನಿದ್ರೆಗೆ ಜಾರಿದ್ದರು ಎಂದು ಅವರು ಹೇಳಿದರು.
ಘಟನೆ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿಯೂ ಟಿಬಿ ವಾರ್ಡ್‌ನಲ್ಲಿ ಇರಲಿಲ್ಲ ಎಂದು ಅಧಿಕಾರಿ ಹೇಳಿದರು.
ವೈದ್ಯಕೀಯ ಮಂಡಳಿಯಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮುಂದಿನ ತನಿಖೆ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.
ಈ ಮಧ್ಯೆ, ಆಸ್ಪತ್ರೆ ಆಡಳಿತ ಮಂಡಳಿಯೂ ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ.
ರೋಗಿಯ ಅಟೆಂಡರ್ ನಿದ್ರಿಸುತ್ತಿದ್ದರು ಮತ್ತು ಆಸ್ಪತ್ರೆಯ ಸಿಬ್ಬಂದಿ ಇತರ ವಾರ್ಡ್‌ಗಳಲ್ಲಿ ಹಾಜರಾಗಿದ್ದರು. ನಾನು ಸಿಸಿಟಿವಿ ದೃಶ್ಯಾವಳಿಗಳನ್ನು (ಘಟನೆಯ) ನೋಡಿಲ್ಲ. ತನಿಖೆಯ ನಂತರವೇ ನಾನು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದು ಸಿರೋಹಿ ಜಿಲ್ಲಾ ಆಸ್ಪತ್ರೆಯ ಪ್ರಧಾನ ವೈದ್ಯಾಧಿಕಾರಿ (ಪಿಎಂಒ) ವೀರೇಂದ್ರ ಸುದ್ದಿಗಾರರಿಗೆ ತಿಳಿಸಿದರು.