ತಿರುವನಂತಪುರಂ: ಕೇರಳದಲ್ಲಿ ಹೋಟೆಲ್ ವ್ಯವಹಾರ ಹೊಂದಿರುವ ಇಟಾಲಿಯನ್ ದಂಪತಿಗಳಿಬ್ಬರು ಹಿಂದಿ ಕಲಿತು ಪರೀಕ್ಷೆಯನ್ನೂ ಬರೆದಿದ್ದಾರೆ. ತಮ್ಮ ಹೋಟೆಲ್ಗೆ ಬರುವ ಗ್ರಾಹಕರೊಂದಿಗೆ ಸಂವಹನ ನಡೆಸಲೆಂದು ಹಿಂದಿ ಸ್ಪೋಕನ್ ತರಗತಿಗೆ ಮೌರೊ ಸರಂಡ್ರಿಯಾ ಮತ್ತು ಮರೀನಾ ಮಟಿಯೊಲಿ ದಂಪತಿಗಳು ಸೇರಿಕೊಂಡಿದ್ದರು.
ಇಟಾಲಿಯನ್ ದಂಪತಿಗಳಿಗೆ ಬರಬರುತ್ತಾ ಹಿಂದಿ ಭಾಷೆಯ ಮೇಲೆ ಅಭಿಮಾನ ಉಂಟಾಗಿದೆ. ನಂತರ ವಾರಾಂತ್ಯದಲ್ಲಿ ತರಗತಿಗೆ ಹೋಗಿ ಏಳು ತಿಂಗಳ ಅವಧಿಯಲ್ಲಿ ಹಿಂದಿ ಬರವಣಿಗೆ ಕಲಿತುಕೊಂಡಿದ್ದಾರೆ. ಬಳಿಕ ಹತ್ತಿರದ ಕಾಟನ್ ಹಿಲ್ ಶಾಲೆಯಲ್ಲಿ ಹಿಂದಿ ಪ್ರಚಾರ ಸಭಾ ನಡೆಸಿದ ಪರೀಕ್ಷೆಯನ್ನೂ ಬರೆದಿದ್ದಾರೆ. ಈ ದಂಪತಿ ಕೇರಳದ ಕೋವಲಂನಲ್ಲಿರುವ ಪರದೇಶ ಇನ್ ಎಂಬ ಹೋಟೆಲ್ ಹೆಸರಿನಲ್ಲಿ ಹೋಟೆಲ್ ಉದ್ಯಮ ಹೊಂದಿದ್ದಾರೆ.
ಮೌರೊ ಸರಂಡ್ರಿಯಾ ಈ ಬಗ್ಗೆ ಕೇರಳದ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹಿಂದಿ ಕಲಿಕೆಯ ಅನುಭವ ಮತ್ತು ಸ್ಫೂರ್ತಿಯನ್ನು ಹಂಚಿಕೊಂಡರು. ನಾವು ಕೃಷ್ಣನನ್ನು ಆರಾಧಿಸುತ್ತೇವೆ. ದೇಶದ ಧಾರ್ಮಿಕ ಪಠ್ಯಗಳ ಕಲಿಕೆಯಿಂದ ಭಾರತದ ಮೇಲೆ ಪ್ರೀತಿ ಹೆಚ್ಚಾಗಲು ಕಾರಣವಾಗಿದೆ. ಈ ಹಿಂದೆ 1978 ರಿಂದ 1988 ರವರೆಗೆ 18 ನೇ ವಯಸ್ಸಿನಲ್ಲಿ ನನ್ನ ಪತ್ನಿ ಆಶ್ರಮದಲ್ಲಿ ವಾಸವಾಗಿದ್ದ ಕಾರಣ ಹಿಂದಿ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಕಳೆದ 18 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದೇವೆ. ಆದರೆ ಇಲ್ಲಿನ ಭಾಷೆಯನ್ನು ಕಲಿಯಲು ಸಾಧ್ಯವಾಗಿರಲಿಲ್ಲ. ಇದೀಗ ವಯಸ್ಸಾಗುತ್ತಿದ್ದಂತೆ ಇಲ್ಲಿನ ಭಾಷೆ ಕಲಿಯಬೇಕೆಂದು ಅನ್ನಿಸತೊಡಗಿದೆ. ಹೀಗಾಗಿ ಹಿಂದಿ ಕಲಿಯಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಹಿಂದಿ ಪ್ರಚಾರ ಸಭಾದ ತಿರುವನಂತಪುರದ ಕಾರ್ಯದರ್ಶಿ ಪ್ರತಿಕ್ರಿಯಿಸಿ ಮೌರೊ ಮತ್ತು ಮರೀನಾ ರಾಜ್ಯದಲ್ಲಿ ಇಟಾಲಿಯನ್ ದಂಪತಿಗಳು ಹಿಂದಿ ಪರೀಕ್ಷೆ ಬರೆದ ಮೊದಲ ವಿದೇಶಿಯರಾಗಿದ್ದಾರೆ. ಕೋವಲಂನಲ್ಲಿ ಹೋಟೆಲ್ ನಡೆಸುತ್ತಿರುವ ದಂಪತಿ ಭವಿಷ್ಯದಲ್ಲಿ ಭಾರತೀಯ ಪೌರತ್ವ ಪಡೆಯುವ ಹಂಬಲದಲ್ಲಿದ್ದಾರೆ ಎಂದು ಹೇಳಿದ್ದಾರೆ.