ಗೇರು ಬೆಳೆಗೆ ಬಾಧಿಸುವ ಕೀಟ, ರೋಗ ಹಾಗೂ ಪೋಷಕಾಂಶ ಕೊರತೆ ಪತ್ತೆ ಹಚ್ಚಿ, ಕನ್ನಡವೂ ಸೇರಿದಂತೆ ಹನ್ನೊಂದು ಭಾಷೆಗಳಲ್ಲಿ ಮಾಹಿತಿ ನೀಡುವ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ವೆಬ್‌ಸೈಟ್ ಮತ್ತು ಮೊಬೈಲ್ ಆಯಪ್ ಅನ್ನು ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ.
ಕೃತಕ ಬುದ್ದಿಮತ್ತೆ(Artificial Intelligence-AI) - ಹೆಚ್ಚು ಪ್ರಚಲಿತದಲ್ಲಿರುವ ತಂತ್ರಜ್ಞಾನ. ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಾಗಿ ಬಳಕೆಯಾಗುತ್ತಿರುವ ತಂತ್ರಜ್ಞಾನವೂ ಹೌದು.
ಈಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ (ಡಿಸಿಆರ್), ಇದೇ 'ಕೃತಕ ಬುದ್ದಿಮತ್ತೆ' ತಂತ್ರಜ್ಞಾನ ಆಧಾರಿತ ಗೇರು ಬೆಳೆ ರಕ್ಷಣೆಗೆ ನೆರವಾಗುವ 'ಕ್ಯಾಶ್ಯೂ ಪ್ರೊಟೆಕ್ಟ್' ಎಂಬ ಮೊಬೈಲ್ ಆಯಪ್ ಅಭಿವೃದ್ಧಿಪಡಿಸಿದೆ. ಈ ತಂತ್ರಾಂಶ, ಗೇರುಬೆಳೆಗೆ ತಗಲುವ ಕೀಟ/ರೋಗ/ಪೋಷಕಾಂಶ ಕೊರತೆಯನ್ನು ಪತ್ತೆಹಚ್ಚಿ, ಪರಿಹಾರ ನೀಡುತ್ತದೆ.
ಹನ್ನೊಂದು ಭಾಷೆಗಳಲ್ಲಿ..
ಡಿಸಿಆರ್‌ನ ಸಸ್ಯತಳಿ ಅಭಿವೃದ್ಧಿ ವಿಭಾಗದ ಪ್ರಧಾನ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ನೇತೃತ್ವದಲ್ಲಿ 13 ವಿಜ್ಞಾನಿಗಳ ತಂಡ ಒಂದೂವರೆ ವರ್ಷ ಕೆಲಸ ಮಾಡಿ, ಈ ಆಯಪ್ ಅಭಿವೃದ್ಧಿಪಡಿ ಸಿದ್ದಾರೆ. ಮೋಹನ್ ಅವರು ಈ ಯೋಜನೆಯ ಪರಿಕಲ್ಪನೆ, ವಿನ್ಯಾಸ ಹಾಗೂ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಗೇರುಕೃಷಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಡಿಸಿಆರ್ ಕೇಂದ್ರದ ವಿಜ್ಞಾನಿಗಳಾದ ಡಾ. ವನಿತಾ, ಡಾ. ರಾಜಶೇಖರ್ ಮತ್ತು ಡಾ. ಶಂಸುದ್ದೀನ್ ಸೇರಿದಂತೆ ಹದಿಮೂರು ವಿಜ್ಞಾನಿಗಳು ತಂತ್ರಾಂಶ ಅಭಿವೃದ್ಧಿಗೆ ಫೋಟೊ ಮತ್ತು ತಾಂತ್ರಿಕ ಮಾಹಿತಿಯುನ್ನು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ವಿಕಾಸ ಯೋಜನೆಯ ಅನುದಾನದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಜನವರಿ 19ರಂದು ಈ ಆಯಪ್ ಬಿಡುಗಡೆಯಾಗಿದೆ.
ಈ ತಂತ್ರಾಂಶದಲ್ಲಿ ಗೇರು ಬೆಳೆಯುವ ಎಲ್ಲಾ ಪ್ರದೇಶಗಳ ರೈತರನ್ನು ತಲುಪುವಂತೆ ಹನ್ನೊಂದು ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ಕನ್ನಡ, ಗುಜರಾತಿ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಮರಾಠಿ, ಗಾರೋ (ಮೇಘಾಲಯದ್ದು)) ಪ್ರತ್ಯೇಕವಾಗಿ ಮಾಹಿತಿಯನ್ನು ಅಳವಡಿಸಿದ್ದಾರೆ.
ಗೇರು ಬೆಳೆ ಬಾಧಿಸುವ 60 ಕೀಟ, 20 ರೋಗ ಹಾಗೂ 10 ಪೋಷಕಾಂಶಗಳ ಕೊರತೆಯನ್ನು ಪತ್ತೆ ಹಚ್ಚಿ ಪರಿಹಾರ ನೀಡುವ ಉದ್ದೇಶವಿಟ್ಟುಕೊಂಡು ಈ ಆಯಪ್ ಅಭಿವೃದ್ಧಿಪಡಿಸಲಾಗಿದೆ. ಸದ್ಯಕ್ಕೆ 6 ಕೀಟಗಳು (ಚಹಾ ಸೊಳ್ಳೆ, ಕಾಂಡ ಹಾಗೂ ಬೇರು ಕೊರಕ, ಹಿಟ್ಟು ತಿಗಣೆ, ಎಲೆಕೊರಕ, ರಸ ಹೀರುವ ಕೀಟ, ಹಣ್ಣು ಮತ್ತು ಕಾಯಿಕೊರಕ) ಹಾಗೂ 1 ರೋಗವನ್ನು (ಲೀಫ್ ಬ್ಲೈಟ್) ಮಾತ್ರ ಪತ್ತೆಹಚ್ಚುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎನ್ನುತ್ತಾರೆ ಮೋಹನ್.
ಬಳಕೆದಾರರು ಏನು ಮಾಡಬೇಕು ?
ಗೂಗಲ್ ಪ್ಲೇಸ್ಟೋರ್‌ನಿಂದ 'ಕ್ಯಾಶ್ಯೂ ಪ್ರೊಟೆಕ್ಟ್' ಆಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಕೀಟಬಾಧೆ ಅಥವಾ ರೋಗಬಾಧೆಯಿರುವ ಗೇರು ಬೆಳೆಯ ಫೋಟೊ ಕ್ಲಿಕ್ಕಿಸಿ, ಆಯಪ್‌ಗೆ ಅಪ್‌ಲೋಡ್ ಮಾಡಬೇಕು. ಈಗಾಗಲೇ ನಿಮ್ಮ ಬಳಿ ಕ್ಲಿಕ್ಕಿಸಿದ ಫೋಟೊವಿದ್ದರೆ, ಅದನ್ನು ಅಪ್‌ಲೋಡ್ ಮಾಡಬಹುದು. ಜಾಲತಾಣದಲ್ಲೂ ಇದೇ ರೀತಿಯ ಪ್ರಕ್ರಿಯೆ ಅನುಸರಿಸಬೇಕು.
ಫೋಟೊ ಅಪ್‌ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಸಮಸ್ಯೆಗಳನ್ನು ಪತ್ತೆಹಚ್ಚಿ ಪರಿಹಾರವೂ ದೊರೆಯುತ್ತದೆ.
ಎರಡರಲ್ಲೂ (ವೆಬ್‌ಸೈಟ್ ಹಾಗೂ ಆಯಪ್) ನೀವು ಅಪ್‌ಲೋಡ್ ಮಾಡಿರುವ ಫೋಟೊದಲ್ಲಿರುವ 'ಬಾಧೆ'ಯನ್ನು ಹೋಲುವ ಅಥವಾ ಅತ್ಯಂತ ಹತ್ತಿರ ಇರುವ ಬಾಧೆಯನ್ನು ತಂತ್ರಾಂಶ ಫೋಟೊ ಸಮೇತ ತೋರಿಸುತ್ತದೆ. ಅದರಲ್ಲಿ ಶೇಕಡಾ ಎಷ್ಟು ಹೋಲಿಕೆಯಾಗಬಹುದು ಎಂಬುದನ್ನೂ ತಿಳಿಸುತ್ತದೆ. ಇದರಿಂದ ಫಲಿತಾಂಶ ಸರಿ ಇದೆಯೋ ಇಲ್ಲವೋ ತಿಳಿಯುತ್ತದೆ. ಜೊತೆಗೆ ಬಾಧೆಯ ಗುಣಲಕ್ಷಣಗಳನ್ನು ಹಾಗೂ ಪರಿಹಾರೋಪಾಯಗಳನ್ನೂ ಸೂಚಿಸುತ್ತದೆ.
ಫಲಿತಾಂಶ ತಪ್ಪಾಗಿದ್ದರೆ/ಸಮಾಧಾನ ಕೊಡದಿದ್ದರೆ ಅಲ್ಲಿಂದಲೇ ಫೋಟೊಗಳನ್ನು ಸಂಬಂಧಪಟ್ಟ ತಜ್ಞರಿಗೆ ನೀವು ಕಳುಹಿಸಬಹುದು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಅನುಭವಸ್ಥರಿಂದ ಉತ್ತರಗಳನ್ನು ಪಡೆಯಬಹುದು ಎನ್ನುತ್ತಾರೆ ಈ ಜಾಲತಾಣ ಮತ್ತು ಕಿರುತಂತ್ರಾಂಶ ಅಭಿವೃದ್ಧಿ ತಂಡದ ಮುಖ್ಯಸ್ಥ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ.
ಜಾಲತಾಣದ ವಿಳಾಸ -https://cashewprotect.icar.gov.in, ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಪ್ಲೇಸ್ಟೋರಿನಲ್ಲಿ Cashew Protect ಹೆಸರಿನಲ್ಲಿ ಕಿರುತಂತ್ರಾಂಶ ಲಭ್ಯ.
ಈಗಾಗಲೇ ಚಾಲ್ತಿಯಲ್ಲಿರುವ ಎಐ ಆಧಾರಿತ ಕೃಷಿ ಆಯಪ್‌ಗಳಲ್ಲಿ, ಗೇರು ಬೆಳೆಯಿರಲಿಲ್ಲ. ಅದನ್ನು ಗಮನಿಸಿ ಈ ಆಯಪ್ ಅಭಿವೃದ್ಧಿಗೆ ಯೋಚಿಸಿದೆ. ಮೂರು ವರ್ಷಗಳ ಕನಸು, ಒಂದೂವರೆ ವರ್ಷದ ಶ್ರಮ, ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಡಿಯಲ್ಲಿ ಬರುವ ದೇಶದ ವಿವಿಧ ಭಾಗಗಳಲ್ಲಿರುವ ಗೇರು ಸಂಶೋಧನಾ ಕೇಂದ್ರಗಳ 13 ವಿಜ್ಞಾನಿಗಳ ಸಹಕಾರ, ಸರ್ಕಾರದ ಪ್ರೋತ್ಸಾಹದೊಂದಿಗೆ ವಿಶ್ವದಲ್ಲೇ ಮೊದಲ ಬಾರಿಗೆ ಗೇರು ಕುರಿತು ಎಐ ಆಧಾರಿತ ಆಯಪ್ ಅಭಿವೃದ್ಧಿಪಡಿಸಲು ಸಾಧ್ಯವಾಯಿತು.
- ಡಾ. ಮೋಹನ್ ತಲಕಾಲುಕೊಪ್ಪ, ವಿಜ್ಞಾನಿ, ಡಿಸಿಆರ್, ಪುತ್ತೂರು
ಸಂಭಾವ್ಯ ಹಾನಿ - ಎಚ್ಚರಿಕೆ
ಆಯಪ್‌ನ 'ಅನಲಿಟಿಕ್ಸ್' ವಿಭಾಗದಲ್ಲಿ ಬೆಳೆಗಾರರು/ಬಳಕೆದಾರರು ಅಪ್‌ಲೋಡ್ ಮಾಡಿದ ಫೋಟೋಗಳ ಆಧಾರದ ಮೇಲೆ ವಿಶ್ವದ ವಿವಿಧ ಪ್ರದೇಶಗಳಲ್ಲಿ, ವಿವಿಧ ಕಾಲಘಟ್ಟಗಳಲ್ಲಿ ಕಂಡುಬರುವ ಕೀಟ, ರೋಗ ಹಾಗೂ ಪೋಷಕಾಂಶ ಕೊರತೆಯ ಸಂಖ್ಯೆ ಮತ್ತು ವಿಧಗಳ ವಿಶ್ಲೇಷಣೆ ಸಿಗುತ್ತದೆ. ಇದರ ಮೂಲಕ ಆಯಾ ಪ್ರದೇಶದ ಕೃಷಿಕರನ್ನು ಸಂಭಾವ್ಯ ಹಾನಿಯ ಬಗ್ಗೆ ಎಚ್ಚರಿಸಬಹುದು. ಆದರೆ ಇದು ಸಾಧ್ಯವಾಗುವುದು ಹೆಚ್ಚು ಬಳಕೆದಾರರು ಹೆಚ್ಚೆಚ್ಚು ಬಳಸಿದಾಗ ಮಾತ್ರ ಎನ್ನುವುದು ತಂತ್ರಾಂಶ ಅಭವೃದ್ಧಿಪಡಿಸಿರುವ ತಂಡದ ಅಭಿಪ್ರಾಯ.
ಜಾಲತಾಣದ ವಿಳಾಸ - https://cashewprotect.icar.gov.in. ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಪ್ಲೇಸ್ಟೋರಿನಲ್ಲಿ Cashew Protect ಹೆಸರಿನಲ್ಲಿ ಕಿರುತಂತ್ರಾಂಶ ಲಭ್ಯ.