ನವದೆಹಲಿ: ಹಿಂಡನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಸಮೂಹದ ವಿರುದ್ಧದ ಕೇಳಿಬಂದಿರುವ ವಂಚನೆಯ ಆರೋಪದ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷವು (ಎಎಪಿ), ದೆಹಲಿ, ಚಂಡೀಗಢ, ಕೋಲ್ಕತ್ತ, ಗುವಾಹಟಿ ಸಹಿತ ದೇಶದ ವಿವಿಧ ಕಡೆಗಳಲ್ಲಿ ಬಿಜೆಪಿ ಕಚೇರಿಗಳ ಎದುರು ಭಾನುವಾರ ಪ್ರತಿಭಟನೆ ನಡೆಸಿತು.
ಎಎಪಿಯ ದೆಹಲಿ ಸಂಚಾಲಕ ಗೋಪಾಲ್ ರೈ ಮಾತನಾಡಿ, ಬಿಜೆಪಿಯು ತನಿಖೆಗೆ ಹೆದರಿ ಓಡಿ ಹೋಗುತ್ತಿದೆ. ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಯಾವುದೇ ತನಿಖೆಯಿಂದಲೂ ಪಲಾಯನವಾದ ಮಾಡುವುದಿಲ್ಲ. ಅದಾನಿ ಸಮೂಹದ ವಂಚನೆಯ ಕುರಿತು ವಿವಿಧ ಪಕ್ಷಗಳ ಸದಸ್ಯರನ್ನೊಳಗೊಂಡ ಜಂಟಿ ಸಂಸದೀಯ ಸಮಿತಿಯು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಕಾರರ ಮೇಲೆ ಜಲಫಿರಂಗಿ ಪ್ರಯೋಗ (ಚಂಡೀಗಢ ವರದಿ): ಅದಾನಿ ಸಮೂಹದ ವಿರುದ್ಧ ತನಿಖೆಗೆ ಆಗ್ರಹಿಸಿ, ಇಲ್ಲಿನ ಬಿಜೆಪಿಯ ಕಚೇರಿಯತ್ತ ಹೊರಟಿದ್ದ ಎಎಪಿಯ ಪ್ರತಿಭಟನಕಾರರನ್ನು ಚಂಡೀಗಢ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ತಡೆದರು. ಆಗ ಪ್ರತಿಭಟನಕಾರರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಎಪಿಯ ಕೆಲವು ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಲಾಲಬಾದ್ ಕ್ಷೇತ್ರದ ಎಎಪಿ ಶಾಸಕ ಜಗದೀಪ್ ಕಾಂಬೋಜ್, 'ಬಿಜೆಪಿಯು ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ' ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಎಎಪಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಪಕ್ಷದ ನಾಯಕರಾದ ಹರಚಂದ್ ಸಿಂಗ್ ಬರ್ಸತ್ ಮತ್ತು ಸನ್ನಿ ಅಹ್ಲುವಾಲಿಯಾ ಮಾತನಾಡಿ, 'ಅದಾನಿ ವಂಚನೆಯ ಕುರಿತು ಪಕ್ಷವು ಧ್ವನಿ ಎತ್ತುವುದನ್ನು ಮುಂದುವರಿಸಲಿದೆ' ಎಂದರು.
ಪ್ರತಿಭಟನೆಗಾಗಿ ಪಂಜಾಬ್‌ನ ವಿವಿಧೆಡೆಯಿಂದ ಪಕ್ಷದ ಕಾರ್ಯಕರ್ತರು ಬಂದಿದ್ದರು. ಪ್ರತಿಭಟನಕಾರರು ಪಂಜಾಬ್ ಬಿಜೆಪಿ ಕಚೇರಿಯತ್ತ ತೆರಳದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಕೋಲ್ಕತ್ತ ವರದಿ: ಇಲ್ಲಿನ ವೆಲ್ಲಿಂಗ್‌ಟನ್ ಸ್ಕ್ವೇರ್‌ನಲ್ಲಿ ಆರಂಭವಾದ ರ‍್ಯಾಲಿಯು ಕಲ್ಕತ್ತಾ ವಿಶ್ವವಿದ್ಯಾಲಯದ ಬಳಿಯ ಕಾಲೇಜು ರಸ್ತೆಯಲ್ಲಿ ಮುಕ್ತಾಯವಾಯಿತು. ರ‍್ಯಾಲಿಯಲ್ಲಿ ಎಎಪಿಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.