ನವದೆಹಲಿ: '2005ರ ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ರಕ್ಷಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದಕ್ಕೆ ಎದುರಾಗಿರುವ ತೊಡಕುಗಳ ಕುರಿತು ಚರ್ಚಿಸಲು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿ' ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನೊಂದ ಮಹಿಳೆಯರಿಗೆ ಈ ಕಾಯ್ದೆಯ ಅಡಿಯಲ್ಲಿ ಅಗತ್ಯ ಕಾನೂನಿನ ನೆರವು ಒದಗಿಸಬೇಕು. ಪತಿ ಹಾಗೂ ಇತರರ ವಿರುದ್ಧ ದೂರು ನೀಡಿದ ಮಹಿಳೆಯರಿಗೆ ಉಳಿದುಕೊಳ್ಳುವುದಕ್ಕಾಗಿ ಆಶ್ರಯ ಮನೆಗಳನ್ನು ಸ್ಥಾಪಿಸಬೇಕು ಎಂದು ಕೋರಿ 'ವಿ ದಿ ವಿಮೆನ್ ಆಫ್ ಇಂಡಿಯಾ' ಹೆಸರಿನ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು.
ಶುಕ್ರವಾರ ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಹಾಗೂ ದೀಪಾಂಕರ್ ದತ್ತ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ, 'ಕೌಟುಂಬಿಕ ದೌರ್ಜನ್ಯ ತಡೆ ವಿಚಾರವಾಗಿ ತನಗೆ ಸಲ್ಲಿಸಲಾಗಿರುವ ವರದಿಯು ನಿರಾಶಾದಾಯಕವಾಗಿದೆ. ಕಾಯ್ದೆಯ ಅಡಿಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಒಬ್ಬೊಬ್ಬ ರಕ್ಷಣಾ ಅಧಿಕಾರಿಯನ್ನು ನೇಮಿಸಲಾಗಿದೆ. ಅಂತಹ ಅಧಿಕಾರಿಗಳು ಸುಮಾರು 500 ರಿಂದ 600 ಪ್ರಕರಣಗಳನ್ನು ನಿರ್ವಹಿಸುವುದು ಕಷ್ಟ' ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಸೂಚನೆ ಮೇರೆಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು (ಎನ್‌ಎಎಲ್‌ಎಸ್‌ಎ) ಅಧ್ಯಯನವೊಂದು ಕೈಗೊಂಡಿತ್ತು. 2022ರ ಜುಲೈ 1ರವರೆಗೆ ಈ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ಪೈಕಿ 4.71 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದಾಗಿ ಅಧ್ಯಯನ ವರದಿಯಲ್ಲಿ ತಿಳಿಸಲಾಗಿತ್ತು.
'ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಚರ್ಚಿಸಲು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮೂರು ವಾರಗಳ ಒಳಗೆ ಸಭೆ ನಡೆಸಬೇಕು. ಹಣಕಾಸು, ಸಾಮಾಜಿಕ ನ್ಯಾಯ ಮತ್ತು ಗೃಹ ಸಚಿವಾಲಯಗಳ ಕಾರ್ಯದರ್ಶಿಗಳೂ ಸಭೆಯಲ್ಲಿ ಭಾಗವಹಿಸಬೇಕು' ಎಂದು ನ್ಯಾಯಪೀಠವು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗೆ ಸೂಚಿಸಿದೆ.
'ಮಿಷನ್ ಶಕ್ತಿ' ಯೋಜನೆಯ ಅನುಷ್ಠಾನದ ಕುರಿತಾದ ವರದಿಯನ್ನೂ ತನಗೆ ಸಲ್ಲಿಸುವಂತೆ ನಿರ್ದೇಶಿಸಿದ ನ್ಯಾಯಪೀಠವು ಎಂಟು ವಾರಗಳ ನಂತರ ಈ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿತು.