ಪಣಜಿ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರ ಜೊತೆ ಸಂಭಾಷಣೆ ನಡೆಸುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಬಳಿಕ ಗೋವಾದ ಮೀನುಗಾರರಾದ ಫ್ರಾನ್ಸಿಸ್ ಫೆರ್ನಾಂಡಿಸ್ ಅಲಿಯಾಸ್ ಪೆಲೆ ಅವರು ಪ್ರಸಿದ್ಧರಾಗಿದ್ದಾರೆ.
ಗೋವಾದ ಬೆನೌಲಿಮ್ ಬೀಚ್‌ನಲ್ಲಿ ವಾಟರ್ ಸ್ಫೋರ್ಟ್ಸ್ ಉದ್ಯಮವನ್ನು ನಡೆಸುತ್ತಿರುವ ಪೆಲೆ ಅವರ ಜೆಟ್‌ಸ್ಕೀಯಲ್ಲಿ ಅಕ್ಷತಾ ಮೂರ್ತಿ ಅವರು ಇಬ್ಬರು ಮಕ್ಕಳೊಂದಿಗೆ ಸೋಮವಾರ ಡಾಲ್ಫಿನ್‌ಗಳನ್ನು ನೋಡಲು ತೆರಳಿದ್ದರು. ಬಳಿಕ ಅವರು ಪೆಲೆ ಅವರೊಂದಿಗೆ ಮಾತನಾಡುತ್ತಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ರಜೆಯಲ್ಲಿ ಬೆನೌಲಿಮ್ ಬೀಚ್‌ಗೆ ಬಂದಿರುವ ಬ್ರಿಟಿಷ್ ಪ್ರಜೆಗಳಿಗೆ ಈ ಮೂಲಕ ಪೆಲೆ ಸುಪರಿಚಿತರಾಗಿದ್ದಾರೆ.
'25 ವರ್ಷಗಳಿಂದ ಪೆಲೆ ಅವರನ್ನು ಬಲ್ಲೆ. ಪ್ರತಿ ವರ್ಷ ರಜೆಯಲ್ಲಿ ನಾವು ಗೋವಾಕ್ಕೆ ಬರುತ್ತಿದ್ದೇವೆ. ನಮ್ಮ ಪ್ರಧಾನಿ ಅವರ ಪತ್ನಿಯೊಂದಿಗೆ ಪೆಲೆ ಅವರು ಮಾತನಾಡುತ್ತಿರುವ ವಿಡಿಯೊ ನೋಡಿ ಆಶ್ಚರ್ಯವಾಯಿತು' ಎಂದು ಬ್ರಿಟನ್ ಪ್ರಜೆ ನೀಲ್ ಫಾರಂಟ್ ತಿಳಿಸಿದ್ದಾರೆ.
ಈ ಹಿಂದೆಯೂ ಹಲವು ಮಂದಿ ಗಣ್ಯರಿಗೆ ಆತಿಥ್ಯ ನೀಡಿದ್ದೇನೆ ಎಂದು ಪೆಲೆ ತಿಳಿಸಿದ್ದಾರೆ.