ಮುಂಬೈ: ಹೋಟೆಲ್ ವೊಂದರಲ್ಲಿ ಊಟ ಸೇವಿಸಿದ ನಂತರ ಐಎಎಸ್ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಮುಂಬೈಯಲ್ಲಿ ನಡೆದಿದೆ. ಮಹಾರಾಷ್ಟ್ರದ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ 57 ವರ್ಷದ ಪ್ರಶಾಂತ್ ದತ್ತಾತ್ರೇಯ ನವಘರೆ ಸಾವನ್ನಪ್ಪಿದ್ದ ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ.
ನವಘರೆ ಬುಧವಾರ ಸಂಜೆ ಹೋಟೆಲ್ ನಲ್ಲಿ ಊಟ ಸೇವಿಸಿದ ನಂತರ ಇದ್ದಕ್ಕಿದ್ದಂತೆ ಕುಸಿದು ಬಿದಿದ್ದಾರೆ. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಪ್ರಕಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.
ಅವರು ಕಾರ್ಯದರ್ಶಿ ಮಟ್ಟದ ಇಬ್ಬರು ಸಹೋದ್ಯೋಗಿಗಳೊಂದಿಗೆ ಹೋಟೆಲ್ ಗೆ ಊಟಕ್ಕೆ ಬಂದಿದ್ದರು. ನಂತರ ಜೆಜೆ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಅವರ ಅಂಗಾಂಗಳನ್ನು ವಿಶ್ಲೇಷಣೆಗಾಗಿ ಸಂರಕ್ಷಿಸಿಡಲಾಗಿದೆ. ಇತರ ವೈದ್ಯಕೀಯ ಪರೀಕ್ಷೆಗಳ ವರದಿಗಾಗಿ ಕಾಯಲಾಗುತ್ತಿದೆ. ಈ ಸಂಬಂಧ ಮಾತಾ ರಾಮಬಾಯಿ ಅಂಬೇಡ್ಕರ್ ರಸ್ತೆ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.