ಆಫ್ರಿಕದ ರಾಷ್ಟ್ರವಾದ ಗಾಂಬಿಯಾದಲ್ಲಿ 70 ಮಂದಿ ಮಕ್ಕಳ ಸಾವಿಗೆ ಕಾರಣವಾದ ಕಲುಷಿತ ಕೆಮ್ಮಿನ ಸಿರಪ್ಗಳ ತಯಾರಕ ಸಂಸ್ಥೆಯಾಗಿರುವ ಹರ್ಯಾಣದ 'ಮೇಡನ್ ಫಾರ್ಮಾಸ್ಯೂಟಿಕಲ್ ಅನ್ನು 2013ರಲ್ಲಿ ವಿಯೆಟ್ನಾಂಗೆ ಕಳಪೆ ದರ್ಜೆಯ ಔಷಧಿಯನ್ನು ಕಳುಹಿಸಿದ ಪ್ರಕರಣದಲ್ಲಿಯೂ ದೋಷಿಗಳೆಂದು ಪರಿಗಣಿಸಿ ಸೋನೆಪತ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಕಳಪೆ ದರ್ಜೆಯ ರ್ಯಾನಿಟಿಡೈನ್ ಹೈಡ್ರೊಕ್ಲೋರೈಡ್ ಮಾತ್ರೆಗಳನ್ನು 'ಬಿಪಿ (ಮಾನೆಕ್-150)' ಎಂಬ ಬ್ರಾಂಡ್ ಹೆಸರಿನಲ್ಲಿ ರಫ್ತು ಮಾಡಿದ ಪ್ರಕರಣದಲ್ಲಿ ಮೇಡನ್ ಫಾರ್ಮಾಸ್ಯೂಟಿಕಲ್ ಕಂಪೆನಿ, ಅದರ ನಿರ್ದೇಶಕ ನರೇಶ್ ಕುಮಾರ್ ಗೋಯಲ್ ಹಾಗೂ ತಾಂತ್ರಿಕ ನಿರ್ದೇಶಕ ಎಂ.ಕೆ. ಶರ್ಮಾ ದೋಷಿಗಳೆಂದು ನ್ಯಾಯಾಲಯವು ಫೆಬ್ರವರಿ 22ರಂದು ನೀಡಿದ ತೀರ್ಪಿನಲ್ಲಿ ಘೋಷಿಸಿದೆಯೆಂದು ' ದಿ ಟ್ರಿಬ್ಯೂನ್' ಪತ್ರಿಕೆ ವರದಿ ಮಾಡಿದೆ. ರ್ಯಾನಿಟಿಡೈನ್ ಎದೆ ಉರಿಯ ತೊಂದರೆಯನ್ನು ಗುಣಪಡಿಸಲು ಬಳಸುವ ಮಾತ್ರೆಯಾಗಿದೆ.
ಈ ಪ್ರಕರಣದಲ್ಲಿ ಗೋಯಲ್ ಹಾಗೂ ಶರ್ಮಾ ಇಬ್ಬರಿಗೂ ಔಷಧಿ ಹಾಗೂ ಪ್ರಸಾದನಾ ಸಾಮಾಗ್ರಿಗಳ ಕಾಯ್ದೆಯ ಸೆಕ್ಷನ್ 27(ಡಿ) ಅಡಿ, ತಲಾ ಎರಡೂವರೆ ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗಿದೆ.
ಏನಿದು ಪ್ರಕರಣ: 2013ರ ಡಿಸೆಂಬರ್ ನಲ್ಲಿ ಆಗ ವಿಯೆಟ್ನಾಂನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಕಾನ್ಸುಲ್ ಜನರಲ್ ಆಗಿದ್ದ ದೀಪಕ್ ಮಿತ್ತಲ್ ಅವರು ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದು ಮೇಡನ್ ಫಾರ್ಮಾಸ್ಯೂಟಿಕಲ್ಸ್ ಸೇರಿದಂತೆ ವಿಯೆಟ್ನಾಂಗೆ ಕಳಪೆದರ್ಜೆಯ ಔಷಧಿಗಳನ್ನು ಪೂರೈಕೆ ಮಾಡಿದ್ದ 46 ಭಾರತೀಯ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಕೋರಿ ಪತ್ರ ಬರೆದಿದ್ದರು.
ಈ 46 ಕಂಪೆನಿಗಳ ಹಿನ್ನೆಲೆಗಳನ್ನು ಪರಿಶೀಲಿಸುವಂತೆ ಹಾಗೂ ಭಾರತೀಯ ಫಾರ್ಮಾ ಕೈಗಾರಿಕೆಗಳಿಗೆ ವಿದೇಶಗಳಲ್ಲಿ ಕೆಟ್ಟ ಹೆಸರು ತಂದಿದ್ದಕ್ಕಾಗಿ ಅವುಗಳಿಗೆ ದಂಡ ವಿಧಿಸುವಂತೆಯೂ ಮಿತ್ತಲ್ ಆರೋಗ್ಯ ಸಚಿವಾಲಯವನ್ನು ಆಗ್ರಹಿಸಿದ್ದರು. 2014ರಲಿ ಮೇಡನ್ ಫಾರ್ಮಾಸ್ಯೂಟಿಕಲ್ಸ್ನ ರ್ಯಾನಿಟಿಡೈನ್ ಮಾತ್ರೆಗಳ ಮಾದರಿಗಳನ್ನು ಚಂಡೀಗಢದಲ್ಲಿರುವ ಪ್ರಾದೇಶಿಕ ಔಷಧಿ ಪರೀಕ್ಷಾ ಪ್ರಯೋಗಾಲಯವು ಪರಿಶೀಲನೆ ನಡೆಸಿದ್ದು, ಅವು ನಿಗದಿತ ಗುಣಮಟ್ಟವನ್ನು ಹೊಂದಿಲ್ಲವೆಂದು ಘೋಷಿಸಿತ್ತು.
ಮೇಡನ್ ಫಾರ್ಮಾಸ್ಯೂಟಿಕಲ್ಸ್ ನ ರ್ಯಾನಿಟಿಡೈನ್ ಔಷಧಿಯಲ್ಲಿ ಸಕ್ರಿಯ ಪದಾರ್ಥಗಳು ಸಮಾನರೂಪದಲ್ಲಿ ಇರಲಿಲ್ಲವೆಂದು ಪ್ರಯೋಗಾಲಯವು ವರದಿಯಲ್ಲಿ ತಿಳಿಸಿತ್ತು. 2014ರ ಸೆಪ್ಟೆಂಬರ್ನಲ್ಲಿ ಅಧಿಕಾರಿಗಳು ಮೇಡನ್ ಫಾರ್ಮಾಸ್ಯೂಟಿಕ್ಸ್ಗೆ ನೋಟಿಸ್ ರವಾನಿಸಿದ್ದು, ಔಷಧಿಯ ಮಾರಾಟ ಹಾಗೂ ವಿತರಣೆಯನ್ನು ನಿಲ್ಲಿಸುವಂತೆ ಹಾಗೂ ತಕ್ಷಣವೇ ದಾಸ್ತಾನನ್ನು ಹಿಂಪಡೆದುಕೊಳ್ಳುವಂತೆ ಸೂಚಿಸಿದ್ದರು.