ಲಂಡನ್: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಮತ್ತು ಅದರ ಸಂಪಾದಕೀಯ ಸಾತಂತ್ರ್ಯವನ್ನು ಬ್ರಿಟನ್ ಸರ್ಕಾರ ಸಂಸತ್ತಿನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ. ಕಳೆದ ವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಯಲ್ಲಿ 'ಪರಿಶೀಲನೆ' ನಡೆಸಿದ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಈ ನಿಲುವು ಪ್ರಕಟಿಸಿದೆ.
ಮಂಗಳವಾರ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯ (ಎಫ್‌ಸಿಡಿಒ) ಕಿರಿಯ ಸಚಿವ ಡೇವಿಡ್ ರುಟ್ಲಿ, 'ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಸಂಬಂಧಿಸಿದಂತೆ ಸರ್ಕಾರ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಪ್ರಬಲ ಪ್ರಜಾಪ್ರಭುತ್ವಕ್ಕೆ ಮಾಧ್ಯಮ ಸ್ವಾತಂತ್ರ್ಯ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅತಿ ಅವಶ್ಯ' ಎಂದು ಹೇಳಿದರು.
'ನಾವು ಬಿಬಿಸಿ ಪರ ನಿಲ್ಲುತ್ತೇವೆ. ಬಿಬಿಸಿ ಜಗತ್ತಿನಾದ್ಯಂತ ನೀಡುತ್ತಿರುವ ಸೇವೆ ಅತ್ಯಂತ ಮಹತ್ವದ್ದು. ಬಿಬಿಸಿ ಆ ಸಂಪಾದಕೀಯ ಸ್ವಾತಂತ್ರ್ಯವನ್ನು ಹೊಂದಿರಬೇಕು ಎಂದು ಬಯಸುತ್ತೇವೆ. ಬಿಬಿಸಿ ನಮ್ಮನ್ನೂ (ಸರ್ಕಾರ) ಟೀಕಿಸಿದೆ, ವಿರೋಧ ಪಕ್ಷವಾದ ಲೇಬರ್ ಪಾರ್ಟಿಯನ್ನೂ ಟೀಕಿಸಿದೆ. ಅದಕ್ಕೆ ಆ ಸ್ವಾತಂತ್ರ್ಯವಿದೆ, ಅದು ಬಹಳ ಮುಖ್ಯ ಎಂದು ನಾವು ನಂಬಿದ್ದೇವೆ. ಈ ಸ್ವಾತಂತ್ರ್ಯದ ಮಹತ್ವದ ಕುರಿತು ಭಾರತ ಸೇರಿದಂತೆ ಜಗತ್ತಿನ ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ' ಎಂದು ಅವರು ಹೇಳಿದರು.
ಹೀಗಿದ್ದರೂ ಎರಡೂ ದೇಶಗಳ ನಡುವಿನ ನಿಕಟ ಬಾಂಧವ್ಯ ಇನ್ನಷ್ಟು ನಿಕಟವಾಗಿ ಮುಂದುವರಿಯಲಿದ್ದು, ಭವಿಷ್ಯದ ಸಂಬಂಧವನ್ನು ಗಟ್ಟಿಗೊಳಿಸಲು 2030ರ ಮಾರ್ಗಸೂಚಿಯನ್ನು ರೂಪಿಸಲಾಗಿದೆ. ಅದರಿಂದಾಗಿ ನಾವು ಹಲವು ವಿಷಯಗಳನ್ನು ರಚನಾತ್ಮಕವಾಗಿ ಚರ್ಚಿಸುವುದಕ್ಕೆ ಅವಕಾಶವಾಗಿದೆ ಎಂದು ಅವರು ತಿಳಿಸಿದರು.
ಬಿಬಿಸಿಯು ಭಾರತದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯ ಪ್ರಮಾಣಕ್ಕೂ, ಅದು ಬಹಿರಂಗಪಡಿಸಿದ ವರಮಾನ ಮತ್ತು ಲಾಭದ ಪ್ರಮಾಣಕ್ಕೂ ತಾಳೆ ಆಗುತ್ತಿಲ್ಲ ಎಂದು ಪರಿಶೀಲನೆಯ ಬಳಿಕ ಆದಾಯ ತೆರಿಗೆ ಇಲಾಖೆ ಹೇಳಿಕೆ ನೀಡಿತ್ತು.