ಮೋರಿಗಾಂವ್: ಕೇಂದ್ರ ಸರ್ಕಾರ ಕೈಗೊಂಡಿರುವ ಕಾರ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನು ಒತ್ತಾಯಿಸಿದ್ದಾರೆ.
ಮೊರಿಗಾಂವ್‌ನಲ್ಲಿ ಚುನಾಯಿತ ಬಿಜೆಪಿ ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಿಜಿಜು, ನಾವು 2024 ರ ಲೋಕಸಭೆ ಚುನಾವಣೆಗೆ ಗುರಿಯನ್ನು ನಿಗದಿಪಡಿಸುವ ಮೂಲಕ ಕೆಲಸ ಮಾಡಬೇಕು. ಬಿಜೆಪಿ ಅಭ್ಯರ್ಥಿ ಈ ಕ್ಷೇತ್ರದಿಂದ ಸಂಸದರಾಗುವಂತೆ ನೋಡಿಕೊಳ್ಳಬೇಕು ಎಂದರು.
ಜನರನ್ನು ಭೇಟಿ ಮಾಡಿ ಸರ್ಕಾರದ ಯೋಜನೆಗಳಾದ ಶೌಚಾಲಯಗಳ ನಿರ್ಮಾಣ ಮತ್ತು ಪ್ರತಿ ಮನೆಗೆ ಕುಡಿಯುವ ನೀರು ಮತ್ತು ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಕಾರ್ಯಚಟುವಟಿಕೆಗಳ ಮೌಲ್ಯಮಾಪನವನ್ನು ಮಾಡಬೇಕು. ಸಾರ್ವಜನಿಕರಿಗೆ ಈ ಸೌಲಭ್ಯಗಳನ್ನು ಯಾರು ನೀಡಿದ್ದಾರೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸಬೇಕು. ಅಭಿವೃದ್ಧಿ ಕೆಲಸ ಮಾಡಿದ್ದರೂ ಸೋತರೆ ಏನು ಪ್ರಯೋಜನ' ಎಂದು ನೆರೆಯ ಅರುಣಾಚಲ ಪ್ರದೇಶದ ಸಂಸದರು ವ್ಯಂಗ್ಯವಾಡಿದರು.
ಸೋಮವಾರ ರಾತ್ರಿ ಮೋರಿಗಾಂವ್ ತಲುಪಿದ ರಿಜಿಜು, ಜನಸಂಘದ ಹಳೆಯ ಸದಸ್ಯರನ್ನು ಭೇಟಿ ಮಾಡಿ ಸ್ಥಳೀಯ ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆದ ವಿಚಾರ ಪರಿವಾರ ಸಮನ್ವಯ ಬೈಠಕ್‌ನಲ್ಲಿ ಪಾಲ್ಗೊಂಡರು. ಬಳಿಕ 'ತಂತ್ರಜ್ಞಾನದೊಂದಿಗೆ ಬದುಕುವುದು ಸುಲಭ' ಎಂಬ ಪ್ರಧಾನ ಮಂತ್ರಿಯವರ ಬಜೆಟ್ ನಂತರದ ವೆಬ್‌ನಾರ್‌ನಲ್ಲಿ ಭಾಗವಹಿಸಿದರು.
ರಿಜಿಜು ಅವರು ಬುಧವಾರ ಹೊರಡುವ ಮೊದಲು ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.