ಭುವನೇಶ್ವರ್: ಪೊಲೀಸ್ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಬಾಣಂತಿಯೊಬ್ಬಳು ತನ್ನ ನಾಲ್ಕ ತಿಂಗಳ ಮಗುವನ್ನು ಯಾರ ಹತ್ತಿರ ಬಿಡುವುದು ಎಂದು ಯೋಚಿಸುತ್ತಿರುವಾಗ ಅಲ್ಲಿಯೇ ಕೆಲಸಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಪರೀಕ್ಷೆ ಮುಗಿಯುವವರೆಗೂ ಹೆತ್ತ ತಾಯಿಯಂತೆ ಎದೆಹಾಲು ಉಣಿಸಿ ಆರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಹಿಳಾ ಪೇದೆಯ ಒಳ್ಳೆಯ ಮನಸ್ಸಿಗೆ ಜನರು ಬಹುಪರಾಕ್ ಹಾಕಿದ್ದಾರೆ.
ಮನಕಲಕುವ ಈ ವಿಶೇಷ ಕ್ಷಣಕ್ಕೆ ಒಡಿಶಾದ ಮಲ್ಕಂಗಿರಿ ಜಿಲ್ಲೆ ಸಾಕ್ಷಿಯಾಗಿದೆ. ಉದಾರತೆಯನ್ನು ತೋರಿದ ಮಹಿಳಾ ಪೊಲೀಸ್ ಬಸಂತಿ ಚೌಧರಿ ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಬಸಂತಿ ಅವರನ್ನು ಮಲ್ಕಂಗಿರಿ ಕಾಲೇಜಿಗೆ ಪರೀಕ್ಷಾ ಕರ್ತವ್ಯಕ್ಕೆಂದು ಭಾನುವಾರ ನಿಯೋಜಿಸಲಾಗಿತ್ತು. ಒಡಿಶಾ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಉದ್ಯೋಗಾಂಕ್ಷಿಗೆ ಎಲ್ಲ ಅಗತ್ಯ ನೆರವನ್ನು ನೀಡಿದ್ದು ಮಾತ್ರವಲ್ಲದೆ, ಆಕೆಯ ನಾಲ್ಕು ತಿಂಗಳ ಮಗುವನ್ನು ಹೆತ್ತ ತಾಯಿಯಂತೆ ನೋಡಿಕೊಳ್ಳುವ ಮೂಲಕ ಎಲ್ಲರ ಮನಗೆದ್ದರು.
ಮೂಲಗಳ ಪ್ರಕಾರ ಚಂಚಲ ಮಲ್ಲಿಕ್ ಅವರು ತಮ್ಮ 4 ತಿಂಗಳ ಹೆಣ್ಣು ಮಗುವನ್ನು ಹೊತ್ತುಕೊಂಡು ಪರೀಕ್ಷೆ ಬರೆಯಲು ಬಂದಿದ್ದರು. ಆದರೆ, ಆಕೆಯ ಜೊತೆ ಮಗು ನೋಡಿಕೊಳ್ಳಲೆಂದು ಕುಟುಂಬದ ಯಾರೊಬ್ಬರು ಸಹ ಬಂದಿರಲಿಲ್ಲ. ಈ ವೇಳೆ ಚಂಚಲ ಭರವಸೆ ಕಳೆದುಕೊಂಡಿದ್ದರು. ಈ ವೇಳೆ ಆಪತ್ಬಾಂಧವ ರೀತಿ ಎದುರಿಗೆ ಬಂದ ಮಹಿಳಾ ಪೇದೆ ಬಸಂತಿ, ಚಂಚಲ ಅವರ ಕಷ್ಟವನ್ನು ಆಲಿಸಿದರು. ಬಳಿಕ ಮಗುವನ್ನು ಪಡೆದುಕೊಂಡು ಆರೈಕೆ ಮಾಡುವ ಮೂಲಕ ಚಂಚಲ ಆರಾಮಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.
ಮಧ್ಯೆ ಮಧ್ಯೆ ಅಳುತ್ತಿದ್ದ ಮಗುವನ್ನು ಸಮಾಧಾನ ಮಾಡುತ್ತಿದ್ದ ಬಸಂತಿ, ಮಗುವಿಗೆ ತಮ್ಮ ಎದೆಹಾಲು ಉಣಿಸಲು ಕೂಡ ಹಿಂಜರಿಯಲಿಲ್ಲ.
ಒಡಿಶಾ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಮಹಿಳೆಯೊಬ್ಬರು ತನ್ನ ನಾಲ್ಕು ತಿಂಗಳ ಮಗುವಿನೊಂದಿಗೆ ಮಲ್ಕಂಗಿರಿ ಕಾಲೇಜಿಗೆ ಬಂದಿದ್ದರು. ಮಗುವನ್ನು ನೋಡಿಕೊಳ್ಳಲು ಆಕಾಂಕ್ಷಿಯ ಜೊತೆ ಯಾರೂ ಇರಲಿಲ್ಲ. ಆದ್ದರಿಂದ ನಮ್ಮ ಹಿರಿಯ ಅಧಿಕಾರಿಯಿಂದ ಅನುಮತಿ ಪಡೆದ ನಂತರ ನಾನು ಆಕಾಂಕ್ಷಿಯನ್ನು ಸಂಪರ್ಕಿಸಿದೆ ಮತ್ತು ಅವಳಿಗೆ ಸಹಾಯ ಮಾಡಿದೆ ಎಂದು ಬಸಂತಿ ಹೇಳಿದರು.
ಮಗು ಒಂದು ಗಂಟೆಗೂ ಹೆಚ್ಚು ಕಾಲ ನನ್ನೊಂದಿಗಿತ್ತು. ಹೆಣ್ಣು ಮಗುವಿಗೆ ಹಸಿವಾದಾಗ ನಾನು ಅವಳಿಗೆ ಹಾಲುಣಿಸಿದೆ. ಪರೀಕ್ಷೆ ಮುಗಿದ ಬಳಿಕ ಮಗುವನ್ನು ಆಕಾಂಕ್ಷಿಯ ತಾಯಿಗೆ ನಾನು ಶಿಶುವನ್ನು ಹಸ್ತಾಂತರಿಸಿದೆ ಎಂದು ಬಸಂತಿ ತಿಳಿಸಿದರು.
ಇದೀಗ ಬಸಂತಿ ಅವರ ಮಾನವೀಯ ಕಾರ್ಯವನ್ನು ಮಲ್ಕಂಗಿರಿ ಪೊಲೀಸ್ ಇಲಾಖೆ ಅಭಿನಂದಿಸಿದೆ. ಇಂದು ಮಲ್ಕಂಗಿರಿಯಲ್ಲಿ ಕಾನ್ಸ್‌ಟೇಬಲ್ (ಸಿವಿಲ್) ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಯೊಬ್ಬರು ತಮ್ಮ 4 ತಿಂಗಳ ಮಗಿವಿನೊಂದಿಗೆ ಬಂದಿದ್ದರು. ಮಗು ನೋಡಿಕೊಳ್ಳಲು ಯಾರೂ ಇಲ್ಲದೆ ಪರದಾಡುತ್ತಿದ್ದ. ಈ ವೇಳೆ ಸ್ಥಳದಲ್ಲಿ ನಿಯೋಜಿಸಲಾದ ಕಾನ್ಸ್‌ಟೇಬಲ್ ಬಸಂತಿ ಚೌಧರಿ ಅವರು ತಮ್ಮ ನೆರವು ನೀಡಿದರು. ಇಬ್ಬರಿಗೂ ವಂದನೆಗಳು ಎಂದು ಟ್ವಿಟರ್‌ನಲ್ಲಿ ಮಲ್ಕಂಗಿರಿ ಪೊಲೀಸರು ಬರೆದಿದ್ದಾರೆ,
ಬಸಂತಿ ಅವರು ಮಗುವನ್ನು ನೋಡಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.