ಪಪ್ಪಾಯಿ ಹಣ್ಣನ್ನು ಇಷ್ಟ ಪಡೆದೇ ಇರುವವರು ಕಡಿಮೆ ಅನ್ನಿಸುತ್ತೆ. ಅದರ ರುಚಿ ಹಾಗೂ ಬಾಯಲ್ಲಿಟ್ಟರೆ ಕರಗುವಂತಹ ಗುಣ ಎಲ್ಲರಿಗೂ ಇಷ್ಟವಾಗುತ್ತೆ. ಅಷ್ಟೇ ಅಲ್ಲ, ಈ ಹಣ್ಣು ತುಂಬಾನೇ ಆರೋಗ್ಯಕರ ಕೂಡ ಹೌದು. ಆದರೆ ಪಪ್ಪಾಯಿ ಹಣ್ಣನ್ನು ಮಕ್ಕಳಿಗೆ ಕೊಡಬಹುದಾ ಅನ್ನೋ ಪ್ರಶ್ನೆ ಸಾಮಾನ್ಯವಾಗಿ ತಾಯಂದಿರಲ್ಲಿ ಇದ್ದೇ ಇರುತ್ತದೆ.
ನಿಜ, ಪಪ್ಪಾಯಿ ಹಣ್ಣು ಮಕ್ಕಳಿಗೂ ಕೂಡ ಕೊಡಬಹುದು. ಆದರೆ ಮಕ್ಕಳಿಗೆ ಪಪ್ಪಾಯಿ ನೀಡುವಾಗ ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಎಷ್ಟು ತಿಂಗಳ ನಂತರ ಮಕ್ಕಳಿಗೆ ಪಪ್ಪಾಯಿ ನೀಡಬೇಕು. ಯಾವೆಲ್ಲಾ ರೆಸಿಪಿಯನ್ನು ತಯಾರಿಸಿ ಮಕ್ಕಳಿಗೆ ನೀಡಬಹುದು? ಇದರಿಂದ ಮಕ್ಕಳಿಗೆ ಆಗೋ ಲಾಭಗಳೇನು? ಪಪ್ಪಾಯಿ ಹಣ್ಣನ್ನು ಸೇವಿಸಿದರೆ ಏನಾದ್ರು ದುಷ್ಪರಿಣಾಮಗಳು ಇದ್ಯಾ? ಎಲ್ಲವನ್ನೂ ಡಿಟೇಲ್ ಆಗಿ ಹೇಳ್ತೀವಿ.
ಆರೋಗ್ಯಕರ ಲಾಭಗಳು
ಸಣ್ಣ ಮಕ್ಕಳಿಗೆ ಪಪ್ಪಾಯಿ ನೀಡುವುದರಿಂದ ಆನೇಕ ರೀತಿಯ ಆರೋಗ್ಯಕರ ಲಾಭಗಳಿದೆ.
1. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಪಪ್ಪಾಯಿ ಹಣ್ಣಿನಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಅಂಶವಿದೆ. ಇದು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪುಟ್ಟ ಮಕ್ಕಳು ಸಾಮಾನ್ಯವಾಗಿ ಶೀತ, ಕಫದಂತಹ ಸಮಸ್ಯೆಯಿಂದ ಬಳಲುತ್ತಾರೆ. ಪಪ್ಪಾಯಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಮಕ್ಕಳು ರೋಗ ಪೀಡಿತರಾಗುವುದನ್ನು ತಪ್ಪಿಸುತ್ತದೆ.
2.ಕಣ್ಣು ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ
ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಪಪ್ಪಾಯಿ ಸೇವಿಸುವುದರಿಂದ ಕಣ್ಣಿನ ದೃಷ್ಟಿಗೆ ತುಂಬಾನೇ ಪರಿಣಾಮಕಾರಿ. ಇನ್ನೂ ಪಪ್ಪಾಯದಲ್ಲಿ ವಿಟಮಿನ್ ಎ ಇರುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ.
3. ಹೊಟ್ಟೆ ಉಬ್ಬುವಿಕೆ, ಮಲವಿಸರ್ಜನೆಯಂತಹ ಸಮಸ್ಯೆಗೆ ಪರಿಹಾರ
ಸಣ್ಣ ಮಕ್ಕಳು ಸಾಮಾನ್ಯವಾಗಿ ಮಲಬದ್ಧತೆಯಂತಹ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ವಯಸ್ಸಿನಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಪಪ್ಪಾಯಿಯಲ್ಲಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಇದು ವಿಸರ್ಜನೆಗೆ ಸಹಕರಿಸುತ್ತದೆ. ಇದರ ಜೊತೆಗೆ ಹೊಟ್ಟೆಯ ಉಬ್ಬರದಂತಹ ಸಮಸ್ಯೆಯನ್ನು ಸರಿಪಡಿಸುತ್ತದೆ. ಮಕ್ಕಳಲ್ಲಿ ಹಸಿವನ್ನು ಹೆಚ್ಚಿಸುತ್ತದೆ.
6. ಅನಿಮೀಯಾ ತಡೆಗಟ್ಟುತ್ತದೆ
ಪಪ್ಪಾಯದಲ್ಲಿ ಐರನ್ ಅಂಶ ಸಮೃದ್ಧವಾಗಿದೆ. ಇದು ಕೆಂಪು ರಕ್ತಕಣಗಳು ಹೆಚ್ಚಾಗಲು ಸಹಕರಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗಲು ಐರನ್ ಅಂಶವಿರುವ ವಸ್ತುವನ್ನು ನೀಡಲು ವೈದ್ಯರು ಸಲಹೆ ನೀಡುತ್ತಾರೆ. ಯಾಕೆಂದರೆ ಇದು ಅನೀಮಿಯತೆಯನ್ನು ಕಡಿಮೆಗೊಳಿಸುತ್ತದೆ.
ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಪಪ್ಪಾಯ ನೀಡಬಹುದು?
ಮಕ್ಕಳು ಸಾಧಾರಣ ಗಟ್ಟಿಯಾದ ವಸ್ತುಗಳು ತಿನ್ನಲು ಶುರುಮಾಡಿದಾಗ ಪಪ್ಪಾಯಿಯನ್ನು ನೀಡಬಹುದು. ಸಾಮಾನ್ಯವಾಗಿ ಏಳರಿಂದ ಎಂಟು ತಿಂಗಳಿನ ಮಕ್ಕಳಿಗೆ ಪಪ್ಪಾಯಿ ಹಣ್ಣು ನೀಡಬಹುದು. ಮೊದಲಿಗೆ ಕಡಿಮೆ ಪ್ರಮಾಣದಲ್ಲಿ ನೀಡಿ, ಯಾಕೆಂದರೆ ಕೆಲವೊಂದು ಮಕ್ಕಳಿಗೆ ಇದರಿಂದ ಅಲರ್ಜಿಯಾಗುವ ಸಾಧ್ಯತೆಯೂ ಹೆಚ್ಚಿದೆ. ಒಂದು ವೇಳೆ ಮಗುವಿಗೆ ಯಾವುದೇ ರೀತಿಯ ಸಮಸ್ಯೆ ಆಗದೇ ಹೋದರೆ ಪ್ರತಿನಿತ್ಯದ ಆಹಾರವಾಗಿ ಕೊಂಚ ಪ್ರಮಾಣದಲ್ಲಿ ನೀಡಬಹುದು.
ಮಕ್ಕಳಿಗಾಗಿ ಪಪ್ಪಾಯಿ ಹಣ್ಣಿನ ರೆಸಿಪಿಗಳು
ಎಲ್ಲಾ ವಯಸ್ಸಿನಲ್ಲಿ ಮಕ್ಕಳಿಗೆ ಒಂದೇ ರೀತಿಯಲ್ಲಿ ಆಹಾರ ನೀಡಲು ಆಗುವುದಿಲ್ಲ. ಹೀಗಾಗಿ ಅವರ ವಯಸ್ಸಿಗೆ ತಕ್ಕಂತೆ ಅಡುಗೆ ತಯಾರಿಸಿ ನೀಡಬೇಕು.
7 ರಿಂದ 8 ತಿಂಗಳ ಮಕ್ಕಳು
* ಪಪ್ಪಾಯಿ ಪ್ಯೂರಿ
* ಪಪ್ಪಾಯಿ ಮತ್ತು ಬಾಳೆಹಣ್ಣಿನ ಪ್ಯೂರಿ
* ಪಪ್ಪಾಯಿ ಮತ್ತು ಯೋಗರ್ಟ್ ಸ್ಮೂಥಿ
* ಪಪ್ಪಾಯಿ ಮತ್ತು ಆಪಲ್ ಪ್ಯೂರಿ
* ಪಪ್ಪಾಯಿ ಮತ್ತು ಬೇಯಿಸಿದ ಆಲೂಗಟ್ಟೆಯನ್ನು ಕಿವುಚಿ ಕೊಡಿ
9 ರಿಂದ 11 ತಿಂಗಳ ಮಕ್ಕಳು
* ಮಾಗಿದ ಪಪ್ಪಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕೊಡಿ
* ಪಪ್ಪಾಯಿ ಜ್ಯೂಸ್
* ಪಪ್ಪಾಯಿ ಮತ್ತು ಮಾವಿನ ಹಣ್ಣಿನ ಸ್ಮೂಥಿ
* ಪಪ್ಪಾಯಿ ಮತ್ತು ಬೇಯಿಸಿದ ಗೆಣಸನ್ನು ಕಿವುಚಿ ಕೊಡಿ
1 ವರ್ಷದ ಮಕ್ಕಳು
* ಪಪ್ಪಾಯಿ ಜೊತೆಗೆ ಜಿಗುಟಾದ ಅನ್ನ
* ಪಪ್ಪಾಯಿ ಮತ್ತು ಬೇಯಿಸಿದ ಕ್ಯಾರೆಟ್ ಸಲಾಡ್
* ಪಪ್ಪಾಯಿ ಮತ್ತು ಪೀಚ್ ಹಣ್ಣಿನ ಸಲಾಡ್
*ಪಪ್ಪಾಯಿ ಮತ್ತು ಬಾಳೆ ಹಣ್ಣನ್ನು ಕಿವುಚಿ ಕೊಡಿ
2 ವರ್ಷದ ಮಕ್ಕಳು
* ಪಪ್ಪಾಯಿ ಹಣ್ಣಿನ ಸಲಾಡ್
* ಪಪ್ಪಾಯಿ ತರಕಾರಿ ಸಲಾಡ್
* ಅನ್ನದ ಜೊತೆಗೆ ಪಪ್ಪಾಯಿ ಪದಾರ್ಥ
* ಚೀಜ್ ಜೊತೆಗೆ ಪಪ್ಪಾಯಿ
*ಪಪ್ಪಾಯಿ ಮತ್ತು ಓಟ್ಸ್
* ಪಪ್ಪಾಯಿ, ಕ್ಯಾರೆಟ್, ಬಟಾಣಿ, ಚೀಜ್ ಅನ್ನು ಒಟ್ಟಾಗಿ ಬೇಯಿಸಿ ಕೊಡಿ
ಪಪ್ಪಾಯಿ ಹಣ್ಣಿನಿಂದ ಆಗುವ ದುಷ್ಟಾರಿಣಾಮಗಳು
ಪಪ್ಪಾಯಿಯಿಂದ ಎಷ್ಟು ಆರೋಗ್ಯಕರ ಲಾಭಗಳಿದೆಯೋ ಅದೇ ರೀತಿ ಕೆಲವೊಂದು ಬಾರಿ ಇದರಿಂದ ಅಲರ್ಜಿಯಂತಹ ಸಮಸ್ಯೆಗಳು ಎದುರಾಗುತ್ತದೆ.
ಅಲರ್ಜಿ ಉಂಟಾಗುತ್ತದೆ
ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದೇ ಆದರೆ ಕೆಲವೊಂದು ಮಕ್ಕಳಿಗೆ ಇದನ್ನು ಸೇವಿಸಿದ ನಂತರ ಅಲರ್ಜಿಯಂತಹ ಸಮಸ್ಯೆ ಉಂಟಾಗುತ್ತದೆ. ತುರಿಸುವಿಕೆ, ಕಜ್ಜಿ, ಮುಖದ ಊತ ಉಂಟಾಗುತ್ತದೆ. ಹೀಗಾದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಹೊಟ್ಟೆ ಕೆಡುವ ಸಾಧ್ಯತೆ ಇದೆ
ಪಪ್ಪಾಯಿ ಆರೋಗ್ಯಕಾರಿ ಹಣ್ಣು ಆದರೆ ಅದನ್ನು ಅತಿಯಾಗಿ ಸೇವಿಸಬಾರದು. ಮಿತ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ. ಅತಿಯಾಗಿ ಸೇವಿಸಿದ್ದೇ ಆದರೆ ಹೊಟ್ಟೆಯಲ್ಲಿ ಕಿರಿಕಿರಿ, ಹೊಟ್ಟೆ ಉಬ್ಬುವುದು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
ಉಸಿರಾಟದ ತೊಂದರೆ ಉಂಟಾಗುತ್ತದೆ
ಪಪ್ಪಾಯಿಯಿಂದಾಗಿ ಪಪೈನ್ ಕಿಣ್ವದಲ್ಲಿ ಅಲರ್ಜಿ ಸಮಸ್ಯೆ ಇರುವವರಲ್ಲಿ ಉಬ್ಬಸ ಅಥವಾ ಉಸಿರಾಟದ ತೊಂದರೆ ಅನುಭವಿಸುವ ಸಾಧ್ಯತೆ ಇದೆ.
ಆರೋಗ್ಯದ ದೃಷ್ಟಿಯಿಂದ ಮಕ್ಕಳಿಗೆ ಪಪ್ಪಾಯಿ ನೀಡುವುದು ಉತ್ತಮ. ಆದರೆ ಕೆಲವೊಂದು ಬಾರಿ ಮಕ್ಕಳಲ್ಲಿ ಅಲರ್ಜಿ ಕಾಣಿಸಿಕೊಳ್ಳುವುದರಿಂದ ಹೊಸ ಆಹಾರವನ್ನು ಮಕ್ಕಳಿಗೆ ನೀಡಿದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಮಕ್ಕಳ ಆರೋಗ್ಯದಲ್ಲಿ ಯಾವುದಾದರೂ ಬದಲಾವಣೆ ಆಗುತ್ತಾ ಅನ್ನೋದನ್ನ ನೋಡಿಕೊಂಡು ಆಹಾರವನ್ನು ಮುಂದುವರಿಸಿದರೆ ಒಳ್ಳೆಯದು.