ರಾಯಪುರ: ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಛತ್ತೀಸಗಢದ ರಾಜ್‌ನಂದ್ಗಾವ್ ಜಿಲ್ಲೆಯಲ್ಲಿ ನಕ್ಸಲರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಘಟನೆ ನಂತರ, ಮಹಾರಾಷ್ಟ್ರ ಪೊಲೀಸರು ಛತ್ತೀಸಗಢ ಮತ್ತು ಮಧ್ಯಪ್ರದೇಶದೊಂದಿಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಮೂರು ರಾಜ್ಯಗಳ ಗಡಿ ಪ್ರದೇಶದಲ್ಲಿ ನಕ್ಸಲರ ಚಲನವಲಗಳ ಮೇಲೆ ನಿಗಾ ವಹಿಸಲಾಗಿದೆ.
ಘಟನೆಯು ಬೆಳಗ್ಗೆ 7 ರಿಂದ 8 ಗಂಟೆ ನಡುವೆ ಬೊರತ್‌ಲಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಬ್ಬರು ಪೊಲೀಸರು ಬೈಕ್‌ನಲ್ಲಿ ಹೋಗುವಾಗ ಈ ದಾಳಿ ನಡೆದಿದೆ ಎಂದು ರಾಜ್‌ನಂದ್ಗಾವ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಮೀನಾ ಪಿಟಿಐಗೆ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಜಿಲ್ಲಾ ಪಡೆಯ ಹೆಡ್ ಕಾನ್‌ಸ್ಟೆಬಲ್ ರಾಜೇಶ್ ಸಿಂಗ್ ರಜಪೂತ್ ಮತ್ತು ಛತ್ತೀಸಗಢದ ಶಸ್ತ್ರಸ್ತ್ರ ಪಡೆದ ಕಾನ್‌ಸ್ಟೆಬಲ್ ಅನಿಲ್ ಕುಮಾರ್ ಸಾಮ್ರಾಟ್ ಮಹಾರಾಷ್ಟ್ರ ಗಡಿಯಿಂದ ಬೊರತ್‌ಲಾವ್ ಪೊಲೀಸ್ ಶಿಬಿರದತ್ತ ಯಾವುದೇ ಶಸ್ತ್ರಸ್ತ್ರಗಳನ್ನು ತೆಗೆದುಕೊಳ್ಳದೆ ಹೋಗುತ್ತಿದ್ದವರ ಮೇಲೆ ನಕ್ಸಲರ ಗುಂಪೊಂದು ದಾಳಿ ನಡೆಸಿದೆ. ಒಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಂತರ ಬೈಕ್‌ಗೆ ಬೆಂಕಿ ಹಚ್ಚಿ ನಕ್ಸಲರು ಸ್ಥಳದಿಂದ ದೌಡಾಯಿಸಿದ್ದಾರೆ. ಆ ಸ್ಥಳದಲ್ಲಿ ತನಿಖಾ ಕಾರ್ಯಾಚರಣೆಯು ನಡೆಯುತ್ತಿದೆ. ಘಟನಾ ಸ್ಥಳವು ರಾಜಧಾನಿ ರಾಯಪುರಕ್ಕೆ 180 ಕಿ.ಮೀ ದೂರದಲ್ಲಿದೆ.
ಘಟನೆ ನಂತರ ಛತ್ತೀಸಗಢ ಗಡಿಯಲ್ಲಿ ಪೊಲೀಸರು ಚೆಕ್‌ಪೋಸ್ಟ್ ನಿರ್ಮಿಸಿ ತನಿಖಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.