ಲಾಹೋರ್: ಲಾಹೋರ್ ನಲ್ಲಿ ನಡೆದ ಫೈಜ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದ ಹಿರಿಯ ಚಿತ್ರಕಥೆಗಾರ, ಸಾಹಿತಿ, ಜಾವೇದ್ ಅಖ್ತರ್, ಪಾಕ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
26/11 ಮುಂಬೈ ದಾಳಿಕೋರರು ಇನ್ನೂ ನೆಮ್ಮದಿಯಾಗಿಯೇ ಅಡ್ಡಾಡಿಕೊಂಡಿದ್ದಾರೆ ಎಂದು ಅಖ್ತರ್ ವಾಗ್ದಾಳಿ ನಡೆಸಿದ್ದಾರೆ.
ಈ ಹೇಳಿಕೆಯ ವೀಡಿಯೋವನ್ನು ಜಿಎನ್ಎನ್ ಯೂಟ್ಯೂಬ್ ಚಾನಲ್ ವರದಿ ಮಾಡಿದ್ದು, ಅದರಲ್ಲಿ
ಅಖ್ತರ್, ನಾವು ಪರಸ್ಪರ ದೂಷಣೆ ಮಾಡಬಾರದು, ಅದರಿಂದ ಯಾವುದೇ ವಿಷಯವೂ
ಪರಿಹಾರವಾಗುವುದಿಲ್ಲ. ಈಗಲೇ ಬಿಗುವಿನ ವಾತಾವರಣ ಇದೆ, ಅದು ಇನ್ನೂ ಹೆಚ್ಚಾಗಬಾರದು.
ನಾವು ಮುಂಬೈ ನ ಜನರು, ನಮ್ಮ ನಗರದ ಮೇಲೆ ದಾಳಿ ನಡೆದಿರುವುದನ್ನು ಕಂಡಿದ್ದೇವೆ.
ದಾಳಿಕೋರರು ನಾರ್ವೇ ಅಥವಾ ಈಜಿಪ್ಟ್ ನಿಂದ ಬಂದವರಲ್ಲ. ಅವರು ನಿಮ್ಮದೇ ದೇಶದಲ್ಲಿ
ಅಡ್ಡಾಡಿಕೊಂಡಿದ್ದಾರೆ. ಆದ್ದರಿಂದ ಹಿಂದೂಸ್ಥಾನಿಗಳ ಹೃದಯದಲ್ಲಿ ಕೋಪವಿದ್ದರೆ, ಅದನ್ನು
ನೀವು ದೂಷಿಸಲಾಗದು ಎಂದು ಅಖ್ತರ್ ಹೇಳಿದ್ದಾರೆ.
ಜಾವೇದ್ ಅಖ್ತರ್ ಪಾಕಿಸ್ತಾನದ ನೆಲದಲ್ಲೇ ಪಾಕ್ ನ ಭಯೋತ್ಪಾದನೆಯನ್ನು ಖಂಡಿಸಿರುವುದಕ್ಕೆ
ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾವೇದ್ ಅವರು ನೇರ ಮತ್ತು
ನಿಸ್ಸಂದಿಗ್ಧವಾಗಿ ಮಾತನಾಡಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ಫೈಜ್ ಫೆಸ್ಟಿವಲ್ ಬಳಿಕ ಅಖ್ತರ್ ದಂಪತಿಗೆ ಪಾಕ್ ಹಾಡುಗಾರ ಅಲಿ ಜಫರ್ ದಂಪತಿ ಆತಿಥ್ಯ
ನೀಡಿದರು. ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಸ್ಮರಣಾರ್ಥ ಲಾಹೋರ್ ನಲ್ಲಿ ಪ್ರತಿ ವರ್ಷ
ಫೈಜ್ ಫೆಸ್ಟಿವಲ್ ಕಾರ್ಯಕ್ರಮ ನಡೆಯುತ್ತದೆ.