ಗಾಂಧಿನಗರ: ಪದವಿ ಹಾಗೂ ಸ್ನಾತಕೋತ್ತರ ಪದವಿ ಮೆಡಿಕಲ್ ಸೀಟುಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಸಮಬಲಕ್ಕೆ ತರಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಎಂಬಿಬಿಎಸ್ ಪದವೀಧರರು ಪಿಜಿ ಕೋರ್ಸ್‌ಗಳನ್ನು ಮುಂದುವರಿಸಲು ಸಾಧ್ಯ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ.
ಇಲ್ಲಿ ನಡೆದ ಗ್ಲೋಬಲ್ ಅಸೋಸಿಯೇಷನ್ ಆಫ್ ಫಿಜಿಷಿಯನ್ಸ್ ಆಫ್ ಇಂಡಿಯನ್ ಆರಿಜಿನ್‌ನ (ಜಿಎಪಿಐಒ) 13ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಸಂಶೋಧನೆ ಮತ್ತು ಆಸ್ಪತ್ರೆಗಳನ್ನು ತೆರೆಯಲು ಅನಿವಾಸಿ ಭಾರತೀಯ ಆರೋಗ್ಯ ವೃತ್ತಿಪರರಿಗೆ ಆಹ್ವಾನ ನೀಡಿದರು. ಈ ವರ್ಷದ ಏಪ್ರಿಲ್-ಮೇ ನಲ್ಲಿ ನಡೆಯಲಿರುವ 'ಹೀಲ್ ಬೈ ಇಂಡಿಯಾ', 'ಹೀಲ್ ಇನ್ ಇಂಡಿಯಾ' ಎಕ್ಸ್‌ಪೋನಲ್ಲಿ 70ಕ್ಕೂ ಹೆಚ್ಚು ದೇಶಗಳು 'ಆಸ್ಪತ್ರೆಯಿಂದ ಆಸ್ಪತ್ರೆಗೆ', 'ದೇಶದಿಂದ ದೇಶಕ್ಕೆ' ಮತ್ತು 'ದೇಶದಿಂದ ಆಸ್ಪತ್ರೆಗೆ' ಎಂಬ ಒಪ್ಪಂದಕ್ಕೆ ಸಹಿ ಹಾಕಲಿವೆ ಎಂದರು.
' ಆಸ್ಪತ್ರೆಗಳನ್ನು ತೆರೆದಾಗ ನಮಗೆ ವೈದ್ಯರ ಅಗತ್ಯತೆ ಇರುತ್ತದೆ. 8 ವರ್ಷದ ಹಿಂದೆ ಭಾರತದಲ್ಲಿ 51,000 ಎಂಬಿಬಿಎಸ್ ಸೀಟುಗಳಿದ್ದವು. ಆದರೆ ಈಗ 1,00,226ಕ್ಕೆ ಏರಿಕೆಯಾಗಿದೆ. ಸ್ನಾತಕೋತ್ತರ ಸೀಟುಗಳು 34,000 ದಿಂದ 64,000ಕ್ಕೆ ಏರಿಕೆ ಆಗಿವೆ' ಎಂದರು.
ಎಂಬಿಬಿಎಸ್ ಯುಜಿ ಮತ್ತು ಪಿಜಿ ಸೀಟುಗಳನ್ನು ಸಮಬಲಕ್ಕೆ ತರುವ ಗುರಿ ಹೊಂದಿದ್ದೇವೆ. ಎಲ್ಲ ವೈದ್ಯರು ಅತ್ಯುತ್ತಮ ಆರೋಗ್ಯ ಶಿಕ್ಷಣ ಪಡೆಯಬೇಕು. 'ಹೀಲ್ ಇನ್ ಇಂಡಿಯಾ' ಅಡಿಯಲ್ಲಿ, 'ಜಗತ್ತನ್ನು ಭಾರತಕ್ಕೆ ಆಹ್ವಾನಿಸುವುದು' ಮತ್ತು 'ಕೈಗೆಟುಕುವ ಮತ್ತು ಗುಣಮಟ್ಟದ ಆರೋಗ್ಯ ರಕ್ಷಣೆ, ಕ್ಷೇಮ ಮತ್ತು ಸಾಂಪ್ರದಾಯಿಕ ಔಷಧವನ್ನು ನೀಡುವ' ಯೋಜನೆ ಇದೆ. ಇದರ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಇದಕ್ಕೆ ಗುಜರಾತ್ ಅತ್ಯುತ್ತಮ ತಾಣವಾಗಿದೆ ಎಂದು ಮಾಂಡವಿಯಾ ಹೇಳಿದರು.
'ಭಾರತವು ಕೋವಿಡ್ ಸಾಂಕ್ರಾಮಿಕದ ನೆರಳಿನಿಂದ ಯಶಸ್ವಿಯಾಗಿ ಹೊರಬಂದಿದೆ. ಆದರೆ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳು ಹೆಚ್ಚುತ್ತಿದ್ದು, ಮುಂದೆ ಆರೋಗ್ಯ ಕ್ಷೇತ್ರದ ಸವಾಲುಗಳಾಗಿವೆ' ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.