ನವದೆಹಲಿ : ಶೈಕ್ಷಣಿಕ ಸಂಸ್ಥೆಗಳಲ್ಲಿ 'ಮುಟ್ಟಿನ ರಜೆ' ಯನ್ನು ಖಚಿತಪಡಿಸುವ ಸಂಬಂಧ ಕಾನೂನು ತರುವ ಯಾವುದೇ ಪ್ರಸ್ತಾವ ಶಿಕ್ಷಣ ಸಚಿವಾಲಯದ ಮುಂದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಶ್ ಸರ್ಕಾರ್ ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ 'ಮುಟ್ಟಿನ ರಜೆ' ಒದಗಿಸುವ ಕುರಿತು ಸರ್ಕಾರ ಕಾನೂನು ರೂಪಿಸುತ್ತದೆಯೇ ಎಂಬ ಪ್ರಶ್ನೆಗೆ ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಸಚಿವರು, 'ಈ ರೀತಿಯ ಯಾವುದೇ ಪ್ರಸ್ತಾವನೆ ಪರಿಗಣನೆಯಲ್ಲಿ ಇಲ್ಲ' ಎಂದು ಹೇಳಿದ್ದಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಮಹಿಳೆಯರು ಮತ್ತು 'ಮಹಿಳಾ ಕೋಶ'ಕ್ಕೆ ಸುರಕ್ಷತೆ ಮತ್ತು ಸುರಕ್ಷಿತ ವಾತಾವರಣಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.