ಕೊಚ್ಚಿ: ದೇವಸ್ಥಾನದ ದೈನಂದಿನ ಪೂಜೆ ಮತ್ತು ಉತ್ಸವಗಳನ್ನು ನಡೆಸುವಲ್ಲಿ ರಾಜಕೀಯದ ಯಾವುದೇ ಪಾತ್ರವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೇರಳ ಹೈಕೋರ್ಟ್, ಸಮಾರಂಭಗಳಲ್ಲಿ ಬಳಸುವ ಅಲಂಕಾರಿಕ ವಸ್ತುಗಳಿಗೆ ನಿರ್ದಿಷ್ಟ ಬಣ್ಣ ಬಳಸುವಂತೆ ಒತ್ತಾಯಿಸುವ ಕಾನೂನುಬದ್ಧ ಹಕ್ಕು ಭಕ್ತ ಅಥವಾ ಜಿಲ್ಲಾಡಳಿತಕ್ಕೆ ಇಲ್ಲ ಎಂದು ಹೇಳಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ನಿರ್ವಹಣೆಯಲ್ಲಿರುವ ದೇವಾಲಯದಲ್ಲಿ ಹಬ್ಬಗಳಿಗೆ ಕೇಸರಿ ಅಥವಾ ಕಿತ್ತಳೆ ಬಣ್ಣದ ಅಲಂಕಾರಿಕ ವಸ್ತುಗಳನ್ನು ಮಾತ್ರ ಬಳಸಬೇಕೆಂದು ಒತ್ತಾಯಿಸಲು ಭಕ್ತರಿಗೆ ಯಾವುದೇ ಕಾನೂನು ಹಕ್ಕಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ. ಜಿ. ಅಜಿತ್ ಕುಮಾರ್ ಅವರ ವಿಭಾಗೀಯ ಪೀಠ ಫೆ. 14 ರಂದು ತನ್ನ ಆದೇಶದಲ್ಲಿ ತಿಳಿಸಿದೆ.
ಅದೇ ರೀತಿ ಇಂತಹ ಹಬ್ಬಗಳಿಗೆ 'ರಾಜಕೀಯ ತಟಸ್ಥ' ಬಣ್ಣದ ಅಲಂಕಾರಿಕ ವಸ್ತುಗಳನ್ನು ಮಾತ್ರ ಬಳಸಬೇಕು ಎಂದು ಜಿಲ್ಲಾಡಳಿತ ಅಥವಾ ಪೊಲೀಸರು ಒತ್ತಾಯಿಸುವಂತಿಲ್ಲ.
ತಿರುವನಂತಪುರದ ಮೇಜರ್ ವೆಲ್ಲಯಾನಿ ಭದ್ರಕಾಳಿ ದೇವಿ ದೇವಸ್ಥಾನದಲ್ಲಿ ಕಲಿಯುಟ್ಟು ಉತ್ಸವಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಎರಡು ಅರ್ಜಿಗಳ ವಿಲೇವಾರಿ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೂಜೆಯ ಹಕ್ಕು ನಾಗರಿಕ ಹಕ್ಕು. ಪ್ರತಿ ದೇವಾಲಯದಲ್ಲಿನ ಆಚರಣೆ ಮತ್ತು ಸಂಪ್ರದಾಯಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.