ತಿರುವನಂತಪುರ: ಓರ್ವ ಮಹಿಳಾ ಯೂಟ್ಯೂಬರ್ ಮತ್ತು ಸ್ಥಳೀಯ ಆಟೋ ಚಾಲಕರ ನಡುವಿನ ವಾಗ್ವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಕೇರಳದಲ್ಲಿ ನಡೆದಿದೆ. ಆಟೋ ಚಾಲಕರು ಸೇರಿ ತನ್ನ ಮೇಲೆ ಹಲ್ಲೆ ಮಾಡಿದರೆಂದು ಯೂಟ್ಯೂಬರ್ ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ಆಟೋ ಚಾಲಕರು ಸಹ ಪ್ರತ್ಯಾರೋಪ ಮಾಡಿದ್ದಾರೆ.
ಪ್ರಶ್ನೆ ಮಾಡಿದ್ದಕ್ಕೆ ಅಲುವಾದ ಮೆಟ್ರೋ ನಿಲ್ದಾಣ ಬಳಿ ಆಟೋ ಚಾಲಕರ ಗುಂಪು ಹಲ್ಲೆ ಮಾಡಿದರು ಎಂದು ಯೂಟ್ಯೂಬರ್ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಟೋ ಚಾಲಕರು ಯುವತಿಯೇ ನಮ್ಮ ಮೇಲೆ ಕೋಪದಿಂದ ಕೆಟ್ಟದಾಗಿ ವರ್ತಿಸಿದರು. ಅಲ್ಲದೆ, ಕೊಳಕು ಪದಗಳಿಂದ ನಮ್ಮನ್ನು ನಿಂದಿಸಿದರು ಎಂದು ಎಂದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಮಹಿಳಾ ಯೂಟ್ಯೂಬರ್ ಮತ್ತು ಆಕೆಯ ತಂಡ ಶಾಲಾ ಮತ್ತು ಕಾಲೇಜಿನ ಮಕ್ಕಳ ಬಳಿ ಡಬಲ್ ಮೀನಿಂಗ್ ಹೊಂದಿರುವ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಉದಾಹರಣೆಗೆ ಮೇಲೆ ಅಥವಾ ಕೆಳಗೆ ಯಾವ ರೀತಿ ಮಲಗುವುದು ಉತ್ತಮ? ಮುಟ್ಟಿನ ಸಂದರ್ಭದಲ್ಲಿ ಕಾಲೇಜು ಮತ್ತು ಮದುವೆಗೆ ಹೋಗಬಹುದಾದರೆ, ದೇವಸ್ಥಾನಕ್ಕೆ ಯಾಕೆ ಹೋಗಬಾರದು? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು.
ಒಂದು ದಿನ ಕೆಲವು ಪ್ರಯಾಣಿಕರು ಈ ಬಗ್ಗೆ ನಮಗೆ ತಿಳಿಸಿದರು. ಬಳಿಕ ನಾವು ಮಹಿಳಾ ಯೂಟ್ಯೂಬರ್ನನ್ನು ವಿಚಾರಣೆ ಮಾಡಿದೆವು. ಇಂತಹ ಕೆಟ್ಟ ಪ್ರಶ್ನೆಗಳನ್ನು ಕೇಳುವುದು ಒಳ್ಳೆಯದಲ್ಲ ಎಂದು ತಿಳಿ ಹೇಳಿದೆವು. ಆದರೆ, ನಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರದ ಯೂಟ್ಯೂಬರ್ ನಮ್ಮ ಮೇಲೆ ಕೋಪಗೊಂಡು ಕೆಟ್ಟ ಪದಗಳಿಂದ ನಿಂದಿಸಿದರು. ನಾವು ಅವಳ ತಂದೆಯ ಸಮಾನ ವಯಸ್ಸಿನವರಾದರೂ ಕೂಡ ಬಾಯಿಗೆ ಬಂದಂತೆ ನಿಂದಿಸಿದಳು ಎಂದು ಆಟೋ ಚಾಲಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.