ಹೈದರಾಬಾದ್: 'ವಂದೇ ಭಾರತ್' ರೈಲು ಯೋಜನೆ ಯಶಸ್ವಿಯಾಗಿದೆ. ಈ ಬೆನ್ನಲ್ಲೇ, ಎರಡು ನಗರಗಳ ನಡುವೆ ಸಂಚರಿಸುವ ಅತ್ಯುತ್ತಮ ದರ್ಜೆಯ ಪ್ರಾದೇಶಿಕ ರೈಲು 'ವಂದೇ ಮೆಟ್ರೊ' ಅಭಿವೃದ್ಧಿಪಡಿಸುವಂತೆ ರೈಲ್ವೆ ಸಚಿವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಂದಿನ 12ರಿಂದ 16 ತಿಂಗಳ ಒಳಗಾಗಿ 'ವಂದೇ ಮೆಟ್ರೊ' ಪ್ರಾಯೋಗಿಕ ಮಾದರಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಈ ರೈಲುಗಳು 100 ಕಿ.ಮೀ ಒಳಗಿನ ಎರಡು ನಗರಗಳ ಮಧ್ಯೆ ಸಂಚರಿಸಲಿವೆ' ಎಂದು ಹೇಳಿದರು.
ಇದೇ ವೇಳೆ, ರೈಲ್ವೆಯು ಕಳೆದ ವರ್ಷ ಆಹಾರ ಉತ್ಪನ್ನ, ರಸಗೊಬ್ಬರ ಮತ್ತಿತರ ವಸ್ತುಗಳ ಸಾಗಣೆಗೆ ₹59,000 ಕೋಟಿ ಮೊತ್ತದಷ್ಟು ಸಬ್ಸಿಡಿ ನೀಡಿದೆ ಎಂದು ಹೇಳಿದರು.