ನವದೆಹಲಿ: ಕೆಲವು ದಿನಗಳ ಹಿಂದೆ ಭಾರತದ ಕಂಪನಿಯೊಂದರ ಕಾಫ್ ಸಿರಪ್ ವಿದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಪ್ರಸಂಗವೊಂದು ನಡೆದಿತ್ತು. ಈಗ ಅದೇ ಜಾಡಿನಲ್ಲಿ ಐ ಡ್ರಾಪ್ಸ್ ಆತಂಕ ಹುಟ್ಟಿಸಿದ್ದು, ಅದನ್ನು ಬಳಸಿದರೆ ದೃಷ್ಟಿ ಕಳೆದುಕೊಳ್ಳುವ ಅದರಲ್ಲೂ ತೀರಾ ಗ್ರಹಚಾರ ಕೆಟ್ಟಿದ್ದರೆ ಪ್ರಾಣವೂ ಹೋಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರತ ಮೂಲದ ಔಷಧ ಉತ್ಪಾದಕ ಕಂಪನಿ ಗ್ಲೋಬಲ್ ಫಾರ್ಮಾದ ಎಝ್ರಿಕೇರ್ (EzriCare) ಐ ಡ್ರಾಪ್ಸ್ ಕುರಿತು ಈ ಅಪವಾದ ಕೇಳಿಬಂದಿದೆ. ಯುಎಸ್ ಫುಡ್ ಆಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಹಾಗೂ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಯಂಡ್ ಪ್ರಿವೆನ್ಷನ್ ಎರಡೂ ಈ ಕುರಿತು ಎಚ್ಚರಿಕೆ ನೀಡಿವೆ. ಇಝ್ರಿಕೇರ್ ಆರ್ಟಿಫಿಷಿಯಲ್ ಟಿಯರ್ಸ್ (EzriCare Artificial Tears) ಅಥವಾ ಡೆಲ್ಸಮ್ ಫಾರ್ಮಾಸ್ ಆರ್ಟಿಫಿಷಿಯಲ್ ಟಿಯರ್ಸ್ (Delsam Pharma's Artificial Tears) ಬಳಸದಂತೆ ಇವು ಎಚ್ಚರಿಕೆ ನೀಡಿವೆ.
ಈ ಐ ಡ್ರಾಪ್ಸ್ಗಳಿಂದ ತೀವ್ರ ಅನಾರೋಗ್ಯ ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿ ಇವುಗಳನ್ನು ಕಂಪನಿ ವಾಪಸ್ ಪಡೆದಿದೆ. ಯುಎಸ್ನಲ್ಲಿ ಇವುಗಳನ್ನು ಬಳಸಿದ 50ಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದು, ಕೆಲವು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಕೆಲವೊಂದು ಗಂಭೀರ ಸಂದರ್ಭಗಳಲ್ಲಿ ರಕ್ತದಲ್ಲಿ ಸೋಂಕು ಉಂಟಾಗಿ ಸಾವೂ ಸಂಭವಿಸಿದೆ ಎನ್ನಲಾಗಿದೆ.