ಕಾಸರಗೋಡು: ರಾಜಕೀಯ ಆಟೋಪಗಳ ಕಾರಣವಾಗಿ ಇಂದೀಗ ಮತ-ಧರ್ಮಗಳ ಮಧ್ಯೆ ಕೃತಕ ಕಂದರಗಳ ಸೃಷ್ಟಿಯಾಗುತ್ತಿದ್ದು, ಪರಂಪರೆಯ ಸಹೃದಯ ಮನಸ್ಸುಗಳ ಭೀತಿಗೆ ಕಾರಣವಾಗುವ ಮಧ್ಯೆ ಹಲವು ಪರಂಪರಾಗದ ಸಾಮರಸ್ಯ ಲಕ್ಷ್ಯದ ಆಚರಣೆಗಳು ಈಗಲೂ ಮತ್ತೆ ಭರವಸೆಗೆ ಕಾರಣವಾಗುತ್ತದೆ. ಶತ-ಶತಮಾನಗಳಿಂದಲೂ ಕಾಸರಗೋಡು ಸಹಿತ ಕರಾವಳಿ ಜಿಲ್ಲೆ ಹಲವು ಮತ-ಧರ್ಮಗಳ ಸಂಯೋಜಿತ ಕರ್ಮಭೂಮಿಯಾಗಿ ಸಾಗಿಬಂದ ಚಲನೆಗಳು ಈಗಲೂ ಕಂಡುಬರುತ್ತದೆ. ಕಾಸರಗೋಡಿನ ಉತ್ತರದ ಗಡಿ ಗ್ರಾಮ ಮಂಜೇಶ್ವರದ ಉದ್ಯಾವರದ ಅರಸು ಮಂಜಿಷ್ಣಾರು-ಸಾವಿರ ಜಮಾಅತ್ ಸಾಮರಸ್ಯ ಪರಂಪರೆಯಂತೆಯೇ ಜಿಲ್ಲೆಯ ದಕ್ಷಿಣ ತುದಿ ಚಿತ್ತಾರಿಕಲ್ ಗ್ರಾಮದ ಪೆರುಂಬಟ್ಟ ಪ್ರದೇಶದಲ್ಲೂ ಇಂತಹದೇ ಪದ್ದತಿಯೊಂದು ಗಮನ ಸೆಳೆಯುತ್ತಿದೆ.
ಪೆರುಂಬಟ್ಟ ವಿಷ್ಣುಮೂರ್ತಿ ದೈವಸ್ಥಾನ ನೇತೃತ್ವದಲ್ಲಿ ಸಾವಿರಾರು ವರ್ಷಗಳಿಂದಲೂ ವಿವಿಧ ಧರ್ಮದ ಜನರು ಸಾಕ್ಷಿಯಾಗಿ ನಡೆದುಬಂದ ಮಸೀದಿ ಭೇಟಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಾವಿರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ತುಳುಕುತ್ತಿದ್ದ ಮಸೀದಿ ಭೇಟಿ ಕಾರ್ಯಕ್ರಮ ಜನಸಮೂಹ ಆಶೀರ್ವಾದ ಮತ್ತು ಸಹೋದರ ಪ್ರೀತಿಯ ಸಂದೇಶವನ್ನು ಸಾರಿತು. ಆಗ ಇಡೀ ದೇಶವೇ ಕಳಂಕರಹಿತ ನಂಬಿಕೆಗೆ ತಲೆಬಾಗುವ ದೃಶ್ಯ ಕಂಡಿತು.
ಪೆರುಂಬಟ್ಟ ಕೆಳಗಿನ ಪಾತರಕುಳಂಗರ ಭಗವತಿ ದೇವಸ್ಥಾನದ ಕಲಿಯಾಟ ಉತ್ಸವ ಇತ್ತೀಚೆಗೆ ನಡೆಯಿತು. ಉತ್ಸವದ ಸಮಾರೋಪದಲ್ಲಿ ಪೆರುಂಬಟ್ಟ ಮುನೀರುಲ್ ಇಸ್ಲಾಂ ಜುಮಾ ಮಸೀದಿಗೆ ಶ್ರೀವಿಷ್ಣುಮೂರ್ತಿ ದೈವ ಸಾಮರಸ್ಯದ ಭೇಟಿ ನೀಡಿತು. ಒಂದೂವರೆ ಶತಮಾನಕ್ಕೂ ಹೆಚ್ಚು ಹಳೆಯದೆಂದು ನಂಬಲಾದ ದೇವಾಲಯ ಮತ್ತು ಜುಮಾ ಮಸೀದಿ ತೇಜಸ್ವಿನಿ ಹೊಳೆಯ ಒಂದೇ ದಂಡೆಯಲ್ಲಿದೆ. ಹಿಂದಿನ ಕಾಲದಲ್ಲಿ ಉತ್ಸವದ ಜೊತೆಗೆ ಬೇಟೆಯೂ ಸಾಮಾನ್ಯವಾಗಿತ್ತು. ಎಲ್ಲಾ ಧರ್ಮೀಯರೂ ಒಟ್ಟಾಗಿ ಭಾಗವಹಿಸುತ್ತಿದ್ದರು ಎಂಬುದು ಪ್ರತೀತಿ. ವಿಷ್ಣುಮೂರ್ತಿ ದೈವಕೋಲದ ವೇಳೆ ಮಸೀದಿಗೆ ಆಗಮಿಸಿ ವμರ್Áಚರಣೆ ಮಾಡಿ ಆಶೀರ್ವಾದದ ಮೂಲಕ ಜನರ ಮನೋಸ್ಥಿತಿಮತೆಯನ್ನು ಕಾಪಿಡುವ ಅಪೂರ್ವ ಆಚರಣೆ ಇಲ್ಲಿಯದು.
ತಗ್ಗು ಪ್ರದೇಶದಲ್ಲಿರುವ ಪಾತರಕುಳಂಗರ ಭಗವತಿ ದೇವಸ್ಥಾನದಲ್ಲಿ ಮೂರು ವರ್ಷಕ್ಕೊಮ್ಮೆ ಮಾತ್ರ ನಾಲ್ಕು ದಿನಗಳ ಉತ್ಸವ ನಡೆಯುತ್ತದೆ. ಬಹಳ ವರ್ಷಗಳಿಂದ ನಿಲ್ಲಿಸಿದ್ದ ಕಳಿಯಾಟ ಮಹೋತ್ಸವ ಮತ್ತೆ ಕಳೆದ 9 ವರ್ಷಗಳ ಹಿಂದೆ ಆರಂಭವಾಯಿತು. ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡುವುದು ಉತ್ಸವದ ಮುಕ್ತಾಯದ ದಿನ. ತೆಯ್ಯಂ ಪ್ರಾಚೀನ ಕಾಲದಲ್ಲಿ ಅಕ್ಕಿ ರಾಶಿಯ ಮೇಲೆ ನಡೆದು ಮಸೀದಿ ತಲುಪುತ್ತಿತ್ತೆಂಬುದು ಇತಿಹಾಸ. ಇಂದು ಮಸೀದಿಯ ಮುಂದೆ ರಾಶಿ ಹಾಕಿರುವ ಅಕ್ಕಿಯ ಮೇಲೆ ತೆಯ್ಯಂ ಕೋಲ ನಡೆಯುತ್ತದೆ. ವಿಷ್ಣುಮೂರ್ತಿ ತೆಯ್ಯಂ ಬರುವ ವೇಳೆಗೆ ದೇವಸ್ಥಾನದ ಅಧಿಕಾರಿಗಳು ಹಾಗೂ ಮಸೀದಿಯ ಪ್ರಮುಖರು, ಸ್ಥಳೀಯರು ಶ್ರೀಗಂಧದ ಬತ್ತಿಗಳನ್ನು ಮಸೀದಿಯ ಮುಂದೆ ಹಚ್ಚಿ ಸ್ವಾಗತಿಸುತ್ತಾರೆ.
ಶ್ರೀವಿಷ್ಣುಮೂರ್ತಿ ದೈವ ಮಸೀದಿ ಪ್ರವೇಶಿಸಿದ ನಂತರ ಪ್ರಾರ್ಥನೆ(ಅರುಳ್‍ಪಾಡ್) ನಡೆಯುತ್ತದೆ. ಬಳಿಕ ಮುಸ್ಲಿಂ ಸಹೋದರರ ಪ್ರಾರ್ಥನೆಗೆ ಅಡ್ಡಿಯಾಗಬಾರದು ಎಂದು ದೈವ ಮಸೀದಿ ಒಳಗಿಂದ ಹೊರಬಂದು ಅಂಗಳದಲ್ಲಿ ಪ್ರಾರ್ಥನೆಗೆ ನುಡಿ ನೀಡುತ್ತದೆ. ವಿಷ್ಣುಮೂರ್ತಿ ಕಳಿಯಾಟ ಮಹೋತ್ಸವದ ಮೊದಲ ದಿನ ಅನ್ನಪ್ರಸಾದ ವಿತರಣೆಗೆ ಮಸೀದಿಯ ಕಡೆಯಿಂದ ವ್ಯವಸ್ಥೆ ಕಲ್ಪಿಸುವುದು ರೂಢಿ. ಹಾಗೆಯೇ ದೈವ ಕ್ಷೇತ್ರದ ಸಮಿತಿಯ ಸದಸ್ಯರು ಮಸೀದಿಯ ಉರೂಸ್‍ಗೆ ಬೇಕಾದ ಸಾಮಗ್ರಿಗಳನ್ನು ಒದಗಿಸುತ್ತಾರೆ. ಕಾಸರಗೋಡು ಚಿತ್ತಾರಿಕಲ್ ಪೆರುಂಬಟ್ಟ ಗ್ರಾಮವು ಅಪರೂಪದ ಸಹೋದರತ್ವಕ್ಕೆ ಸಾಕ್ಷಿಯಾಗಿ ವಿಸ್ಮಯಕರವಾದ ಆಚರಣೆಗಳಿಂದ ಈ ಮೂಲಕ ಇನ್ನೂ ಪ್ರತಿಮೆಯಾಗಿದೆ. ವಿಷ್ಣುಮೂರ್ತಿ ದೈವಗಳ ಮಸೀದಿ ಭೇಟಿ ಇಲ್ಲಿ ಎಲ್ಲರೂ ಒಂದೇ ಎಂಬುದನ್ನು ನೆನಪಿಸುತ್ತದೆ.
ಮಸೀದಿಗೆ ಭೇಟಿ ನೀಡಿ ಅಭಯ ನೀಡಿದ ಶ್ರೀವಿಷ್ಣುಮೂರ್ತಿ ದೈವ: ಸಾಮರಸ್ಯದ ಕೊಂಡಿ ಪೆರುಂಬಟ್ಟ ಶ್ರೀವಿಷ್ಣುಮೂರ್ತಿ
0
ಫೆಬ್ರವರಿ 19, 2023