ಉತ್ತರ ಪ್ರದೇಶ: ತಮ್ಮನ ಪರವಾಗಿ ಅಣ್ಣ ಬಂದು ಪದವಿ ಪರೀಕ್ಷೆಯನ್ನು ಬರೆದು ಸಿಕ್ಕಿ ಬಿದ್ದಿರುವ ಘಟನೆ ಉನ್ನಾವೋ ಜಿಲ್ಲೆಯಲ್ಲಿರುವ ಮುಸ್ತಫಾಬಾದ್‌ನ ಶಕುಂತಲಾ ದೇವಿ ಕಾಶಿರಾಮ್ ವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ. ಸದ್ಯ ಪರೀಕ್ಷೆ ಬರೆದಿರುವ ಶಾದಾಬ್ ಎಂಬಾತನನ್ನು ಪೊಲೀಸರು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.
ಪರೀಕ್ಷಾ ಪ್ರವೇಶ ಪಟ್ಟಿಯಲ್ಲಿ ಆರೋಪಿಯ ಸಹೋದರನ ಫೋಟೋ ಕಳಪೆ ಗುಣಮಟ್ಟದಲ್ಲಿತ್ತು. ಹೀಗಾಗಿ ಆತನಂತೇ ಇರುವ ಬದಲಿ ವ್ಯಕ್ತಿ ಬಂದು ಪರೀಕ್ಷೆ ಬರೆದರು ಯಾರಿಗೂ ಅನುಮಾನ ಬಾರದು ಎಂಬ ದುರಾಲೋಚನೆಯಲ್ಲಿ ಆರೋಪಿ ಶಾದಾಬ್ ಈ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ತನ್ನ ಸಹೋದರನ ಪರವಾಗಿ ಬಂದು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕರಿಗೆ ಅನುಮಾನ ಬಾರದಂತೆ ಈತ ವರ್ತಿಸಿದ್ದ. ಆದರೆ ಒಂದು ಹಂತದಲ್ಲಿ ಅನುಮಾನ ಬಂದು ಪರಿಶೀಲಿಸಿದಾಗ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ನಿಜವಾದ ಅಭ್ಯರ್ಥಿ ಮುಖೀಮ್ ಬದಲಿಗೆ ಶಾದಾಬ್ ಪರೀಕ್ಷೆಯನ್ನು ಬರೆಯುತ್ತಿರುವುದು ಗೊತ್ತಾಗಿದೆ.
ಕೂಡಲೇ ಪರೀಕ್ಷಾ ಮೇಲ್ವಿಚಾರಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪರೀಕ್ಷಾ ಉಸ್ತುವಾರಿ ವರ್ಷರಾಣಿ ಮಿಶ್ರಾ ಅವರ ದೂರಿನ ಮೇರೆಗೆ ಶಾದಾಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಕೋಟ್ವಾಲಿ ಇನ್ಸ್‌ಪೆಕ್ಟರ್ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ.
ಆರೋಪಿಯನ್ನು ತನಿಖೆಗೆ ಒಳಪಡಿಸಲಾಗಿದ್ದು, ವಂಚನೆ, ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತ ಸಹೋದರನ ಬದಲಿಗೆ ಬೇರೆ ಯಾವುದಾದರು ಪರೀಕ್ಷೆ ಬರೆದಿದ್ದಾನೆಯೇ ಎಂದು ತಿಳಿಯಲು ಪ್ರಯತ್ನಿಸಲಾಗಿದೆ. ಇದಕ್ಕಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ.