ನವದೆಹಲಿ: ಪೊಲೀಸ್ ಠಾಣೆಗಳು ಮತ್ತು ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎನ್ನುವ ತನ್ನ ನಿರ್ದೇಶನವನ್ನು ಒಂದು ತಿಂಗಳ ಅವಧಿಯೊಳಗೆ ಪಾಲಿಸುವಂತೆ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ನ್ಯಾಯಪೀಠವು, ಕ್ಯಾಮೆರಾ ಅಳವಡಿಸುವಿಕೆಗೆ ಸಂಬಂಧಿಸಿದಂತೆ ಮಾರ್ಚ್ 29ರೊಳಗೆ ತಮ್ಮ ಪ್ರಮಾಣಪತ್ರಗಳನ್ನು (ಅಫಿಡವಿಟ್) ಸಲ್ಲಿಸುವಂತೆ ಸರ್ಕಾರಗಳಿಗೆ ಮಂಗಳವಾರ ಸೂಚಿಸಿದೆ.
'ಈ ನಿರ್ದೇಶನಗಳನ್ನು ಪಾಲಿಸದಿದ್ದರೆ, ಕೇಂದ್ರದ ಗೃಹ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯದರ್ಶಿಗಳು ಮತ್ತು ಆಯಾ ರಾಜ್ಯ ಸರ್ಕಾರಗಳ ಗೃಹ ಕಾರ್ಯದರ್ಶಿಗಳ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ' ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಅವರನ್ನೊಳಗೊಂಡ ಪೀಠವು ಹೇಳಿದೆ.
ಬಂಧಿಸುವ ಹಾಗೂ ವಿಚಾರಣೆಯ ಅಧಿಕಾರವನ್ನು ಹೊಂದಿರುವ ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ(ಇ.ಡಿ) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೇರಿದಂತೆ ಇತರ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ರೆಕಾರ್ಡಿಂಗ್ ಉಪಕರಣಗಳನ್ನು ಅಳವಡಿಸುವಂತೆ 2020ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ನ್ಯಾಯಮೂರ್ತಿ ಆರ್.ಎಫ್. ನರಿಮನ್ ನೇತೃತ್ವದ ನ್ಯಾಯಪೀಠವು 2020ರ ಡಿಸೆಂಬರ್‌ನಲ್ಲಿ ಕಸ್ಟಡಿ ಚಿತ್ರಹಿಂಸೆಗೆ ಸಂಬಂಧಿಸಿದ ವಿಷಯದ ಕುರಿತು ವಿಚಾರಣೆ ವೇಳೆ, ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ರೆಕಾರ್ಡಿಂಗ್ ಉಪಕರಣಗಳನ್ನು ಅಳವಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ 2017ರ ಪ್ರಕರಣವೊಂದನ್ನು ಗಮನದಲ್ಲಿಟ್ಟುಕೊಂಡು, ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಶೀಲಿಸಲು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆಯೂ ಆದೇಶಿಸಿತ್ತು.