ಹೈದರಾಬಾದ್: ಸೋಂಕು ರೋಗಗಳು ಹಾಗೂ ಪಿಡುಗಿನ ಸಂದರ್ಭದಲ್ಲಿನ ಸನ್ನದ್ಧತೆಗೆ ಸಂಬಂಧಿಸಿ ಹೈದರಾಬಾದ್‌ನಲ್ಲಿ 'ಉತ್ಕೃಷ್ಟತಾ ಕೇಂದ್ರ' ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಭಾನುವಾರ ಘೋಷಿಸಿದೆ.
'ಡಾ.ಸೈರಸ್ ಪೂನಾವಾಲಾ ಸೋಂಕು ರೋಗಗಳು ಹಾಗೂ ಪಿಡುಗಿಗೆ ಸಂಬಂಧಿಸಿದ ಸನ್ನದ್ಧತೆಯ ಉತ್ಕೃಷ್ಟತಾ ಕೇಂದ್ರ'ವನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ (ಐಐಪಿಎಚ್) ಆವರಣದಲ್ಲಿ ಸ್ಥಾಪಿಸಲಾಗುವುದು' ಎಂದು ಎಸ್‌ಐಐ ಪ್ರಕಟಣೆ ತಿಳಿಸಿದೆ.
ತೆಲಂಗಾಣದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಅವರು ಎಸ್‌ಐಐ ಸಿಇಒ ಅದಾರ್ ಪೂನಾವಾಲಾ ಅವರೊಂದಿಗೆ ವರ್ಚುವಲ್ ವಿಧಾನದ ಮೂಲಕ ಭಾನುವಾರ ನಡೆಸಿದ ಚರ್ಚೆ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಎದುರಾಗುವ ತುರ್ತು ಸಂದರ್ಭಗಳಲ್ಲಿ ಸಮುದಾಯಕ್ಕೆ ಮಾಹಿತಿ, ಸಂಪನ್ಮೂಲ ಹಾಗೂ ನೆರವು ಒದಗಿಸುವುದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆಯೊಂದು ಇರಬೇಕು ಎಂಬ ಉದ್ದೇಶದಿಂದ ಈ 'ಉತ್ಕೃಷ್ಟತಾ ಕೇಂದ್ರ'ವನ್ನು ಸ್ಥಾಪಿಸಲಾಗುತ್ತದೆ ಎಂದು ಎಸ್‌ಐಐ ತಿಳಿಸಿದೆ.
ಕಳೆದ ವರ್ಷ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆ ವೇಳೆಯಲ್ಲಿ, ಸಚಿವ ಕೆ.ಟಿ.ರಾಮರಾವ್ ಅವರು ಎಸ್‌ಐಐ ಸಿಇಒ ಅದಾರ್ ಪೂನಾವಾಲಾ ಅವರೊಂದಿಗೆ ನಡೆಸಿದ ಮಾತುಕತೆ ಸಂದರ್ಭದಲ್ಲಿ ಇಂಥ ಕೇಂದ್ರ ಸ್ಥಾಪನೆ ಕುರಿತು ಚರ್ಚೆ ನಡೆದಿತ್ತು.