ಕೊಲ್ಲಂ: ಕೊಲ್ಲಂ ಜಿಲ್ಲೆಯ ಪುತ್ತು ಎಂಬಲ್ಲಿ 68 ವರ್ಷದ ವ್ಯಕ್ತಿಯೊಬ್ಬ ತನ್ನ ಸ್ವಂತ ಚಿತೆಯನ್ನು ಸಿದ್ಧಪಡಿಸಿ ನಂತರ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮರನಾಡ್ ಸಮೀಪದ ತನ್ನ ಕುಟುಂಬದ ಜಮೀನಿನಲ್ಲಿ ವಿಜಯಕುಮಾರ್ ಎಂಬ ವ್ಯಕ್ತಿಯ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿದೆ.
ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದ ವಿಜಯಕುಮಾರ್ ಕೆಲಸಮಯದಿಂದ ಉದ್ಯೋಗಕ್ಕೂ ಹೋಗುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಮೀನಿನಲ್ಲಿರುವ ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ವಿಜಯ್‌ಕುಮಾರ್ ಸೋದರಿ ಜಮೀನಿನಲ್ಲಿ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿ ಯಾವುದೇ ಮರಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿರಬೇಕೆಂದು ತಿಳಿದುಕೊಂಡು ನೆರೆಮನೆಯವರೊಬ್ಬರ ಸಹಾಯದಿಂದ ಬೆಂಕಿಯನ್ನು ನಂದಿಸಿದ್ದರು. ಆದರೆ ಬೆಳಗ್ಗಿನ ಹೊತ್ತು ಅಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆಯಾಗಿತ್ತು.
ವಿಜಯ್‌ಕುಮಾರ್ ಬರೆದಿದ್ದೆನ್ನಲಾದ ಸುಸೈಡ್ ನೋಟ್ ಪೊಲೀಸರಿಗೆ ದೊರಕಿದೆ. ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗದ ಕಾರಣ ಜೀವವನ್ನು ಅಂತ್ಯಗೊಳಿಸುತ್ತಿರುವುದಾಗಿ ಸ್ನೇಹಿತನೊಬ್ಬನನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಲಾಗಿದೆ.