ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಾಯ ದೇವಸ್ಥಾನದಲ್ಲಿ ನೂತನ ಪ್ರವೇಶ ದ್ವಾರ ಉದ್ಘಾಟನೆಗೊಂಡಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮ ಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರದ ಮುಖ್ಯಸ್ಥ ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಪ್ರವೇಶ ದ್ವಾರದ ದಾನಿಗಳಾದ ಎಸ್ ಜೆ ಪ್ರದಾದ್ ಕಾಸರಗೋಡು, ಮಿತ್ತೂರು ಪುರುಷೋತ್ತಮ ಭಟ್, ಮಲಬಾರ್ ದೇವಸ್ವಮ್ ಬೋರ್ಡ್ ಅಧ್ಯಕ್ಷ ಕೊಟ್ಟಾರ ವಾಸುದೇವನ್, ಸಿ.ಸಂಜೀವ ರೈ ಕೆಂಗಣಾಜೆ ಹಾಗೂ ಇತರರು ಉಪಸ್ಥಿತರಿದ್ದರು. ಟ್ರಸ್ಟಿಗಳಾದ ಶಂಕರನಾರಾಯಣ ಭಟ್ ಸ್ವಾಗತಿಸಿ, ತಾರಾನಾಥ ರೈ ವಂದಿಸಿದರು. ಪದ್ಮನಾಭ ಶೆಟ್ಟಿ ಚಕಿತ್ತಡ್ಕ ಮತ್ತು ಲೋಕನಾಥ ಶೆಟ್ಟಿ ಮಾಯಿಲೆಂಗಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಳೆದ ವರ್ಷ ಜೈ ತುಲುನಾಡ್ ಸಂಘಟನೆ "ಬಲೆ ತುಲು ಲಿಪಿ ಕಲ್ಪುಗ" ಎಂಬ ಕಾರ್ಯಗಾರ ಮಾಡಿ ಕಾಟುಕುಕ್ಕೆಯ ಹಲವಾರು ಜನರಿಗೆ ತುಳುಲಿಪಿ ಶಿಕ್ಷಕರಾಗಿ ಜೈ ತುಲುನಾಡ್ ಕಾಸ್ರೋಡ್ ಘಟಕದ ಕಾರ್ಯದರ್ಶಿ ಕಾರ್ತಿಕ್ ಕೆ. ಎನ್. ಹಾಗು ಜೊತೆ ಕಾರ್ಯದರ್ಶಿ ಜಗನ್ನಾಥ ಕುಲಾಲ್ ಇವರು ತರಗತಿಗಳನ್ನು ನಡೆಸಿ ತುಲು ಲಿಪಿಯನ್ನು ಕಲಿಸಿ ಪ್ರೇರಣೆಯಾಗಿದ್ದಾರೆ. ಊರವರ ಅಪೇಕ್ಷೆ ಮೇರೆಗೆ ಹಾಗೂ ಆಡಳಿತ ಮಂಡಳಿಯ ಸಮ್ಮತಿಯೊಂದಿಗೆ ದೇವಸ್ಥಾನದ ಮಹಾದ್ವಾರದಲ್ಲಿ ತುಳುಲಿಪಿ ಇದೀಗ ರಾರಾಜಿಸುತ್ತಿದೆ.