ಅಮೃತಸರ: ಕ್ರಾಂತಿಕಾರಿ ವಿಚಾರಗಳ ಬೋಧಕ ಅಮೃತ್‌ಪಾಲ್ ಸಿಂಗ್ ಅವರ ಆಪ್ತ ಲವ್‌ಪ್ರೀತ್ ಸಿಂಗ್ ತೂಫಾನ್ ಅವರನ್ನು ಶುಕ್ರವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.
ರೂಪನಗರ ಜಿಲ್ಲೆಯ ಚಮ್ಕೌರ್ ಸಾಹಿಬ್ ನಿವಾಸಿ ವರೀಂದರ್ ಸಿಂಗ್ ಎಂಬುವವರನ್ನು ಅಪಹರಿಸಿ, ಥಳಿಸಿರುವ ಆರೋಪದಲ್ಲಿ ಇವರನ್ನು ಬಂಧಿಸಲಾಗಿತ್ತು.ಅಜ್ನಾಲಾದ ನ್ಯಾಯಾಲಯವು ಬಿಡುಗಡೆಗೆ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ಲವ್‌ಪ್ರೀತ್ ಅವರನ್ನು ಅಮೃತಸರದ ಕೇಂದ್ರೀಯ ಕಾರಾಗೃಹದಿಂದ ಬಿಡುಗಡೆಗೊಳಿಸಲಾಯಿತು.
ಅಪರಾಧ ನಡೆದ ಸ್ಥಳದಲ್ಲಿ ಲವ್‌ಪ್ರೀತ್ ಇರಲಿಲ್ಲ ಎಂಬುದು ತನಿಖೆಯಿಂದ ತಿಳಿದು ಬಂದಿರುವುದರಿಂದ ಅವರನ್ನು ಬಿಡುಗಡೆಗೊಳಿಸಬೇಕೆಂದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 'ಸುಳ್ಳು ಮೊಕದ್ದಮೆ ದಾಖಲಿಸಿ ಲವ್‌ಪ್ರೀತ್‌ರನ್ನು ಜೈಲಿಗೆ ಹಾಕಲಾಗಿತ್ತು' ಎಂದು ಅಮೃತ್ ಪಾಲ್ ಆರೋಪಿಸಿದ್ದಾರೆ.
ಲವ್‌ಪ್ರೀತ್ ಬಿಡುಗಡೆಗೆ ಆಗ್ರಹಿಸಿ ಖಲಿಸ್ತಾನ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್ ಅವರ ಬೆಂಬಲಿಗರು ಗುರುವಾರ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಖಡ್ಗ ಮತ್ತು ಬಂದೂಕುಗಳನ್ನು ಹಿಡಿದಿದ್ದ ಪ್ರತಿಭಟನಕಾರರು ಬ್ಯಾರಿಕೇಡ್‌ಗಳನ್ನು ದಾಟಿ ಠಾಣೆಗೆ ನುಗ್ಗಿದ್ದರು.
'ಹೇಡಿತನದ ವರ್ತನೆ':
ಪೊಲೀಸ್ ಠಾಣೆಗೆ ನುಗ್ಗಿದ ಪ್ರತಿಭಟನಕಾರರು ಪವಿತ್ರ ಗುರು ಗ್ರಂಥ್ ಸಾಹಿಬ್ ಅನ್ನು ಗುರಾಣಿಯಂತೆ ಬಳಸಿಕೊಂಡು, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಇದು ಹೇಡಿತನದ ವರ್ತನೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.
ಶಾಂತಿಯುತವಾದ ಪ್ರತಿಭಟನೆಗೆ ಅನುಮತಿ ನೀಡಿದ್ದೆವು ಆದರೆ ಅವರು ಆಯುಧಗಳನ್ನು ಹಿಡಿದು ಮುತ್ತಿಗೆ ಹಾಕಿದ್ದಾರೆ ಎಂದೂ ತಿಳಿಸಿದ್ದಾರೆ.
ಪ್ರತಿಭಟನಕಾರರೊಂದಿಗೆ ನಡೆದಿದ್ದ ಘರ್ಷಣೆಯಲ್ಲಿ ಆರು ಮಂದಿ ಪೊಲೀಸರು ಗಾಯಗೊಂಡಿದ್ದರು.