ಅಹಮದಾಬಾದ್: ಕೈರಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ ನಿಯಮಿತದ (ಅಮುಲ್ ಡೇರಿ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯು ಸಂಘದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದೆ.
ಬಿಜೆಪಿ ನಾಯಕ ವಿಪುಲ್ ಪಟೇಲ್ ಅವರು ಅಮುಲ್ ಡೈರಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆದರು, ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಕಾಂತಿ ಸೋಧಾ ಪಾರ್ಮರ್ ಅವರು ಉಪಾಧ್ಯಕ್ಷರಾಗಿ ಆಯ್ಕೆ ಆದರು.
ಅಮುಲ್ ಡೈರಿಯಲ್ಲಿಯೂ ಅಧಿಕಾರ ಕಳೆದುಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವು ಎಲ್ಲಾ 18 ಹಾಲು ಸಹಕಾರ ಸಂಘಗಳಲ್ಲಿ ಅಧಿಕಾರ ಕಳೆದುಕೊಂಡಂತಾಗಿದೆ.
ಸಹಕಾರ ಸಂಘದ ನಾಲ್ವರು ನಿರ್ದೇಶಕರಾದ ಜುವನ್‌ಸಿನ್ಹ ಚೌಹಾನ್, ಸೀತಾಬೆನ್ ಪಾರ್ಮರ್, ಶಾರ್ದಾಬೆನ್ ಪಟೇಲ್ ಮತ್ತು ಘೇಲಾಬಾಯಿ ಝಾಲಾ ಅವರು ಕಳೆದ ವಾರವಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಸಂಘದ ಮೇಲೆ ಬಿಜೆಪಿಯು ಸಂಪೂರ್ಣ ಹಿಡಿತ ಸಾಧಿಸಲು ಸಾಧ್ಯವಾಯಿತು ಎನ್ನಲಾಗಿದೆ.
2017ರಲ್ಲಿ ಶಾಸಕ ರಾಮ್‌ಸಿನ್ಹ ಪಾರ್ಮರ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಾಗಿನಿಂದಲೇ ಅಮುಲ್ ಡೇರಿ ಮೇಲೆ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಳ್ಳಲು ಆರಂಭಿಸಿತು.
ಹಾಲು ಸಹಕಾರ ಸಂಘಗಳು ಚುನಾವಣೆಯಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ ಎನ್ನಲಾಗಿದೆ.