HEALTH TIPS

ರಾಜಕೀಯ ಗೂಢಚರ್ಯೆ: ಸಿಸೋಡಿಯಾ ವಿಚಾರಣೆ- ಸಿಬಿಐಗೆ ಕೇಂದ್ರ ಸಮ್ಮತಿ

 

              ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಫೀಡ್‌ಬ್ಯಾಕ್‌ ಯೂನಿಟ್‌ (ಎಫ್‌ಬಿಯು) ಮೂಲಕ ರಾಜಕೀಯ ಗೂಢಚರ್ಯೆ ನಡೆಸಿದ ಹಾಗೂ ರಹಸ್ಯ ಮಾಹಿತಿ ಕಲೆಹಾಕಿದ ಆರೋಪದಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವಾಲಯವು ಸಿಬಿಐಗೆ ಬುಧವಾರ ಅನುಮತಿ ನೀಡಿದೆ.

ಇದರೊಂದಿಗೆ ಸಿಸೋಡಿಯಾ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಿಸುವ ಹಾದಿ ಸುಗಮಗೊಂಡಂತಾಗಿದೆ.

              1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17ರ ಅಡಿಯಲ್ಲಿ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐಗೆ ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವಾಲಯವು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವರ ಕಚೇರಿಗೆ ರವಾನಿಸಿರುವ ಪತ್ರದಲ್ಲಿ ತಿಳಿಸಿದೆ.

                      ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಅವರು ಇದೇ 26ರಂದು ಸಿಬಿಐ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕಿದೆ.

                  'ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸ್ವಾಯತ್ತ ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರದ ಮೇಲೆ ನಿಗಾ ಇಡುವ ಹಾಗೂ ಅಗತ್ಯ ಮಾಹಿತಿ ಸಂಗ್ರಹಿಸುವ ಸಲುವಾಗಿ ದೆಹಲಿ ಸರ್ಕಾರವು ಎಫ್‌ಬಿಯು ಸ್ಥಾಪಿಸಿತ್ತು. ಈ ಘಟಕವು ರಾಜಕೀಯ ಗೂಢಚರ್ಯೆ ನಡೆಸಿ ರಹಸ್ಯ ಮಾಹಿತಿಯನ್ನು ಕಲೆಹಾಕಿರುವುದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಸಿಸೋಡಿಯಾ ವಿರುದ್ಧ ಎಫ್‌ಐಆರ್‌ ದಾಖಲಿಸಬಹುದು' ಎಂದು ಸಿಬಿಐ ಪ್ರಾಥಮಿಕ ತನಿಖೆಯ ವರದಿಯಲ್ಲಿ ಹೇಳಿದೆ.

               'ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು 2015ರಲ್ಲಿ ನಡೆದಿದ್ದ ಸಂಪುಟ ಸಭೆಯ ಎದುರು ಎಫ್‌ಬಿಯು ರಚನೆಯ ಪ್ರಸ್ತಾವನೆಯನ್ನು ಇಟ್ಟಿದ್ದರು. ಆದರೆ ಈ ಘಟಕದ ಕಾರ್ಯಸೂಚಿ ಏನು ಎಂಬುದರ ಕುರಿತ ಮಾಹಿತಿಯನ್ನು ಯಾರಿಗೂ ಒದಗಿಸಿರಲಿಲ್ಲ. ಎಫ್‌ಬಿಯುಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸುವುದಕ್ಕಾಗಿ ಲೆಫ್ಟಿನೆಂಟ್‌ ಗವರ್ನರ್‌ ಅವರಿಂದ ಅನುಮೋದನೆಯನ್ನೂ ಪಡೆದಿರಲಿಲ್ಲ' ಎಂದು ದೂರಿದೆ.

               'ಎಫ್‌ಬಿಯು 2016ರಲ್ಲಿ ಕಾರ್ಯಾರಂಭ ಮಾಡಿತ್ತು. ಗುಪ್ತಚರ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಈ ಘಟಕಕ್ಕೆ ₹1 ಕೋಟಿ ಮೊತ್ತ ಹಂಚಿಕೆ ಮಾಡಲಾಗಿತ್ತು. ಈ ಘಟಕವು ಅಗತ್ಯ ಮಾಹಿತಿಯ ಜೊತೆಗೆ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಗುಪ್ತಚರ ಮಾಹಿತಿಗಳನ್ನೂ ಕಲೆಹಾಕಿದೆ' ಎಂದು ಆರೋಪಿಸಿದೆ.

                  ದೆಹಲಿ ಸರ್ಕಾರದ ವಿಚಕ್ಷಣಾ ಇಲಾಖೆಯು ಎಫ್‌ಬಿಯುನಲ್ಲಿ ಹಲವು ಅಕ್ರಮ ನಡೆದಿರುವುದನ್ನು ಪತ್ತೆಹಚ್ಚಿತ್ತು. ಈ ಇಲಾಖೆ ನೀಡಿದ ಮಾಹಿತಿಯ ಆಧಾರದಲ್ಲಿ ಸಿಬಿಐ ಪ್ರಾಥಮಿಕ ತನಿಖೆ ಕೈಗೊಂಡಿತ್ತು.

       'ಉದ್ದೇಶಪೂರ್ವಕವಾಗಿಯೇ ನಿಯಮ ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹಾಗೂ ವಿಚಕ್ಷಣಾ ಇಲಾಖೆಯ ಆಗಿನ ಕಾರ್ಯದರ್ಶಿ ಸುಕೇಶ್‌ಕುಮಾರ್‌ ಜೈನ್‌ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಇದರಿಂದ ಬಹಿರಂಗಗೊಳ್ಳುತ್ತದೆ' ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

           'ಎಫ್‌ಬಿಯು ಕಲೆಹಾಕಿದ್ದ ಶೇ 60ರಷ್ಟು ಮಾಹಿತಿಯು ವಿಚಕ್ಷಣಾ ಹಾಗೂ ಭ್ರಷ್ಟಾಚಾರ ವಿಚಾರಗಳಿಗೆ ಸಂಬಂಧಿಸಿದ್ದಾಗಿತ್ತು. ಉಳಿದ ಶೇ 40ರಷ್ಟು ಮಾಹಿತಿಯು ರಾಜಕೀಯ ಹಾಗೂ ಇತರ ವಿಚಾರಗಳಿಗೆ ಸಂಬಂಧಿಸಿದ್ದಾಗಿತ್ತು. 2016ರ ಫೆಬ್ರುವರಿಯಿಂದ 2016ರ ಸೆ‍ಪ್ಟೆಂಬರ್‌ ಅವಧಿಯಲ್ಲಿ ಎಫ್‌ಬಿಯು ಅಧಿಕಾರಿಗಳು ಸಲ್ಲಿಸಿದ್ದ ವರದಿಗಳ ಪೈಕಿ ಬಹುಪಾಲು ವರದಿಗಳು ಕೆಲ ವ್ಯಕ್ತಿ ಹಾಗೂ ರಾಜಕೀಯ ಘಟಕಗಳ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿತ್ತು. ಎಎಪಿ ಹಾಗೂ ಅದರ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಅವರಿಗೆ ಅಗತ್ಯವಿರುವ ರಾಜಕೀಯ ಗುಪ್ತಚರ ಮಾಹಿತಿ ಒದಗಿಸುವುದಕ್ಕಾಗಿಯೂ ಎಫ್‌ಬಿಯುವನ್ನು ಬಳಸಿಕೊಳ್ಳಲಾಗಿತ್ತು. ಇದು ಅಕ್ಷಮ್ಯ' ಎಂದೂ ದೂರಲಾಗಿದೆ.

                                     ಹೇಡಿತನದ ಸಂಕೇತ: ಸಿಸೋಡಿಯಾ

                  'ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದು ಹೇಡಿತನದ ಸಂಕೇತ' ಎಂದು ಮನೀಷ್‌ ಸಿಸೋಡಿಯಾ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

               'ಎಎಪಿಯು ಹೆಚ್ಚೆಚ್ಚು ಬೆಳವಣಿಗೆ ಹೊಂದಿದ ಹಾಗೆಲ್ಲಾ ನಮ್ಮ ವಿರುದ್ಧ ದಾಖಲಾಗುವ ಪ್ರಕರಣಗಳು ಏರಿಕೆಯಾಗುತ್ತವೆ' ಎಂದು ಅವರು ಟ್ವೀಟ್‌ ಮಾಡಿದ್ದಾರೆ.

                   ಕೂಡಲೇ ಬಂಧಿಸಲಿ: 'ಸಿಸೋಡಿಯಾ ಅವರನ್ನು ಸಿಬಿಐ ಕೂಡಲೇ ಬಂಧಿಸಬೇಕು' ಎಂದು ಬಿಜೆಪಿ ದೆಹಲಿ ಘಟಕವು ಆಗ್ರಹಿಸಿದೆ.

                  'ಬೇಹುಗಾರಿಕೆ ಪ್ರಕರಣದ ಪ್ರಮುಖ ಆರೋಪಿ ಅರವಿಂದ ಕೇಜ್ರಿವಾಲ್‌ ಅವರನ್ನೂ ವಿಚಾರಣೆಗೆ ಒಳಪಡಿಸಬೇಕು' ಎಂದೂ ಒತ್ತಾಯಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries