ಚೆನ್ನೈ: ತಿರುಪತ್ತೂರಿನ ವಾಣಿಯಂಬಾಡಿಯಲ್ಲಿ ಉಚಿತ ಸೀರೆಗೆ ಮಹಿಳೆಯರು ಮುಗಿಬಿದ್ದಿದ್ದರಿಂದ ಹಠಾತ್ ಕಾಲ್ತುಳಿತ ಸಂಭವಿಸಿದ್ದು ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ತೈಪೂಸಂ ಸಂದರ್ಭದಲ್ಲಿ ಸೀರೆಗಳ ಸಂಗ್ರಹಕ್ಕಾಗಿ ಟೋಕನ್‌ಗಳನ್ನು ವಿತರಿಸಲಾಗುತ್ತಿತ್ತು ಎಂದು ತಿರುಪತ್ತೂರು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಏಕಾಏಕಿ ಟೋಕನ್ ಗಾಗಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಜಮಾಯಿಸಿದ್ದರಿಂದ ಸ್ಥಳದಲ್ಲಿ ನೂಕುನುಗ್ಗಲು ಉಂಟಾಗಿ ಅವಘಡ ಸಂಭವಿಸಿದೆ.
ತಿರುಪತ್ತೂರಿನ ಬನಿಯಂಬಾಡಿಯಲ್ಲಿ ತೈಪೂಸಂ ನಿಮಿತ್ತ ವ್ಯಕ್ತಿಯೊಬ್ಬರು ಉಚಿತ ಸೀರೆ ಮತ್ತು ಬಿಳಿ ಧೋತಿ ನೀಡುವ ಸಂಬಂಧ ಟೋಕನ್‌ಗಳನ್ನು ವಿತರಿಸುತ್ತಿದ್ದರು. ಟೋಕನ್‌ಗಳನ್ನು ಪಡೆಯುವ ತರಾತುರಿಯಲ್ಲಿ ಮಹಿಳೆಯರ ನಡುವೆ ಕಾಲ್ತುಳಿತ ಸಂಭವಿಸಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಲಕ್ಷ ನೆರವು ಘೋಷಣೆ
ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕಾಲ್ತುಳಿತದಲ್ಲಿ ಪ್ರಾಣ
ಕಳೆದುಕೊಂಡ ಮಹಿಳೆಯರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು ಮುಖ್ಯಮಂತ್ರಿಗಳು ಪ್ರತಿ
ಮಹಿಳೆಯ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ.