ಬದಿಯಡ್ಕ: ಆಹಾರ ಸುರಕ್ಷತೆಯ ಕೊರತೆಯಿಂದ ಹಲವಾರು ಮಂದಿ ಆಹಾರ ವಿಷಬಾಧೆಗೊಳಗಾಗಿ ಮೃತಪಟ್ಟಿರುವ ಬೆನ್ನಿಗೇ ರಾಜ್ಯ ಸರ್ಕಾರವು ಇತ್ತೀಚೆಗೆ ಹೋಟೆಲ್ ಗಳು, ಬೇಕರಿ ಸಹಿತ ವಿವಿಧ ಆಹಾರ ಪದಾರ್ಥ-ಪಾನೀಯ ತಯಾರಿಕೆ-ವಿತರಣಾ ಅಂಗಡಿಗಳ ಎಲ್ಲಾ ಉದ್ಯೋಗಿಗಳಿಗೂ ಆರೋಗ್ಯ ಕಾರ್ಡ್ ಕಡ್ಡಾಯಗೊಳಿಸಿದೆ. ಇದರ ಭಾಗವಾಗಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಇದೀಗ ಧಾವಂತದಲ್ಲಿ ಆರೋಗ್ಯ ಕಾರ್ಡ್ ಮಾಡಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳು ಭರದಿಂದ ಸಾಗುತ್ತಿದೆ.
ಆದರೆ, ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಂತೆ ಅಗತ್ಯವಿರುವ ಜನಸಾಮಾನ್ಯರಿಗೆ; ಸಾಮಾನ್ಯ ಕಾರ್ಮಿಕರಿಗೆ ಈ ಕಾರ್ಡ್ ಸುಲಭದಲ್ಲಿ ಲಭಿಸದೆ ತೀವ್ರ ಸಂಕಷ್ಟ ತಲೆದೋರಿರುವುದು ಆಡಳಿಯ ಯಂತ್ರದ ತುಘಲಕ್ ನೀತಿಯ ಪ್ರತೀಕವಾಗಿ ಕಳವಳಕ್ಕೆಡೆಮಾಡಿದೆ.
ಹೋಟೆಲ್, ಬೇಕರಿ ಹಾಗೂ ಇತರ ಆಹಾರ ತಯಾರಕರು, ವಿತರಕರು ಆರೋಗ್ಯ ಕಾರ್ಡ್ ಮಾಡಿಸುವ ಅಗತ್ಯವಿದ್ದು, ಫೆ.ತಿಂಗಳಾಂತ್ಯದ ಮೊದಲು ಎಲ್ಲವರೂ ಕಡ್ಡಾಯವಾಗಿ ಮಾಡಿಸಲು ಸೂಚಿಸಲಾಗಿದೆ. ಇದರಂತೆ ಆಯಾ ಪ್ರದೇಶ ವ್ಯಾಪ್ತಿಯ ಪ್ರಾಥಮಿಕ-ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ಮಾಡಿಸಬೇಕಾಗುತ್ತದೆ. ಇದಕ್ಕಾಗಿ ಮೆಡಿಕಲ್ ಫಿಟ್ ನೆಸ್ ಸರ್ಟಿಫಿಕೇಟ್ ಪ್ರತಿಯೊಬ್ಬ ನೌಕರರಿಗೆ ಕಡ್ಡಾಯವಾಗಿದೆ. ಇದಕ್ಕಾಗಿ ಆರೋಗ್ಯ ಕೇಂದ್ರಗಳಿಗೆ ತೆರಳಿ ಚರ್ಮ, ಕಣ್ಣು ದೃಷ್ಟಿ, ಗಾಯಗಳು, ಬೆಂಕಿಯ ಗಾಯಗಳು, ಹುಣ್ಣುಗಳು, ಚುಚ್ಚುಮದ್ದುಗಳನ್ನು ನೀಡಿರುವ ಬಗ್ಗೆ ನಿಖರತೆಗಳೊಂದಿಗೆ ಆಯಾ ಪ್ರದೇಶದ ವ್ಯದ್ಯಾಧಿಕಾರಿಗಳ ಮುದ್ರೆ-ಸಹಿಗಳನ್ನೊಳಗೊಂಡ ಪ್ರಮಾಣಪತ್ರ ಹಾಜರುಪಡಿಸಬೇಕೆಂಬುದು ಕಠೀನವಾದ ಆದೇಶ.
ಆದರೆ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳನ್ನೇ ಒಳಗೊಂಡ ಗ್ರಾ.ಪಂ.ಗಳಲ್ಲಿ ಸರಿಯಾದ ಪರಿಶೋಧನಾ ವ್ಯವಸ್ಥೆಗಳಿಲ್ಲದೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಬದಿಯಡ್ಕ, ಮುಳದ್ಳೇರಿಯ, ಎಣ್ಮಕಜೆ, ಪುತ್ತಿಗೆ, ಮಧೂರು, ವರ್ಕಾಡಿ, ಮೀಂಜ, ಪೈವಳಿಕೆ ಮೊದಲಾದ ಬಹುತೇಕ ಗ್ರಾ.ಪಂ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ಆರೋಗ್ಯ ಪರಿಶೋಧನೆಗಳು ಲಭ್ಯವಿರದ ಕಾರಣ ಕಾರ್ಮಿಕರು ಪರದಾಡುವಂತಾಗಿದೆ. ಇರುವ ಉದ್ಯೋಗಕ್ಕೆ ದಿನಗಟ್ಟಲೆ ರಜೆಮಾಡಿ ಕೆಲವು ಪರಿಶೋಧನೆಗಳಿಗೆ ಕಾಸರಗೋಡು, ಕಾಞಂಗಾಡಿನ ತಾಲೂಕು-ಜಿಲ್ಲಾ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತದೆ. ಜೊತೆಗೆ ಮಲ ಪರೀಕ್ಷೆಯಂತಹ ಸೂಕ್ಷ್ಮ ಪರಿಶೀಲನೆಗೆ ಖಾಸಗೀ ಲ್ಯಾಬೋರೇಟರಿಗಳಿಗೆ ಸಂಪರ್ಕಿಸಬೇಕಿದ್ದು, ಹಲವರಿಗೆ ಅಲ್ಲಿಯ ಪರಿಶೀಳನಾ ಶುಲ್ಕವನ್ನೂ ಪಾವತಿಸಲು ಅಸಾಧ್ಯವಾಗಿ ಪರಿತಪಿಸುವಂತಾಗಿದೆ.
ಸರ್ಕಾರ ಆದೇಶಗಳನ್ನು ಜಾರಿಗೊಳಿಸುವುದು ಉಚಿತವಾದರೂ, ಅ|ಭಿವೃದ್ದಿಯಲ್ಲಿ ಹಿಂದುಳಿದಿರುವ, ಸೌಕರ್ಯ ವಂಚಿತ ಆರೋಗ್ಯ ಕೇಂದ್ರಗಳೇ ಹೆಚ್ಚಿರುವ ಕಾಸರಗೋಡು ಜಿಲ್ಲೆಯ ಅವ್ಯವಸ್ಥೆಯ ಕಾರಣ ಆಹಾರ-ಪಾನೀಯ ವಿಭಾಗದ ಕಾರ್ಮಿಕರು-ಉದ್ಯೋಗಿಗಳು ಏನು ಮಾಡಬೇಕೆಂಬುದೇ ತಿಳಿಯದೆ ಕಂಗಾಲಾಗಿದ್ದಾರೆ. ಫೆ. ತಿಂಗಳ ಅಂತ್ಯದ ವೇಳೆಗೆ ಎಲ್ಲರಿಗೂ ಕಡ್ಡಾಯವಾಗಿದ್ದು, ಶೇ.45 ರಷ್ಟು ಮಂದಿಗೆ ಮಾತ್ರ ಆರೋಗ್ಯ ಕಾರ್ಡ್ ಲಭಿಸಿದ್ದು ಬಹುದೊಡ್ಡ ವಿಭಾಗ ಇನ್ನೂ ಅಲ್ಲಲ್ಲಿ ಕಾರ್ಡ್ ಗಾಗಿ ಅಲೆದಾಡುತ್ತಿರುವುದು ಕಂಡುಬರುತ್ತಿದೆ. ಕಾರ್ಡ್ ಇಲ್ಲದೆ ಮುಂದಿನ ತಿಂಗಳಿಂದ ಉದ್ಯೋಗಕ್ಕೆ ತೆರಳುವಂತಿಲ್ಲ ಎoಬ ಕಾನೂನಿನ ಕಾರಣ ಅಯೋಮಯರಾಗಿ ಭೀತಿಯಲ್ಲಿರುವ ಕಾರ್ಮಿಕರ ರಕ್ಷಣೆಗೆ ಸರ್ಕಾರದ ಅಧಿಕೃತರು, ಆರೋಗ್ಯ ವಿಭಾಗದವರು ಜವಾಬ್ದಾರರಾಗಿ ಇನ್ನದರೂ ವ್ಯವಸ್ಥೆ ಕಲ್ಪಿಸಬೇಕಿದೆ.
ಅಭಿಮತ :1)
ಬದಿಯಡ್ಕ ಸಹಿತ ಹಲವು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೆಲವು ಪರೀಕ್ಷೆಗಳು ಲಭ್ಯವಿಲ್ಲದಿರುವುದು ಹೌದು. ಈ ನಿಟ್ಟಿನಲ್ಲಿ ಕಾಸರಗೋಡಿನ ತಾಲೂಕು ಆಸ್ಪತ್ರೆಯಲ್ಲಿ ಪರಿಶೋಧನೆಗೆ ಸೂಚಿಸಲಾಗುತ್ತಿದೆ. ಲಭ್ಯವಿಲ್ಲದ ವ್ಯವಸ್ಥೆಯನ್ನು ಹಠಾತ್ತನೆ ವ್ಯವಸ್ಥೆಗೊಳಿಸಲೂ ಅಡಿಯಾಗಿದೆ. ಈ ಹಿನ್ನೆಲೆಯಲ್ಲಿ ನಿಯಮಿತರಾಗಿ ಅಡುಗೆ-ಪಾನೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಸೂಚಿಸಿದ ಸರ್ಕಾರಿ ವ್ಯವಸ್ಥೆಯಡಿಯಲ್ಲಿ ಪರಿಶೀಲನೆ ನಡೆಸಿ ಪರರಮಾಣಪತ್ರಗಳನ್ನು ಜೋಡಿಸಿಕೊಂಡಿರುವುದರ ಬಗ್ಗೆ ಗಲಿಬಿಲಿಗೊಳ್ಳದೆ ಸಹಕರಿಸಬೇಕು.
-ಶ್ರೀ.ಬಿಜು.
ಆರೋಗ್ಯ ಪರಿವೀಕ್ಷಕ. ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರ.
…………………………………………………………………………………………………………………………………………………………………………………..
2) ನೆಗಡಿಯ ಕಾರಣಕ್ಕೆ ಮೂಗನ್ನೇ ಕೊಯ್ದುಕೊಳ್ಳುವ ಸರ್ಕಾರಿ ಆದೇಶಗಳು ನಿಜವಾಗಿಯೂ ಜನಸಾಮಾನ್ಯರಿಗೆ ಹೊರೆ ಮತ್ತು ಸಂಕಷ್ಟಕ್ಕೀಡುಮಾಡುತ್ತದೆ. ಸೌಕರ್ಯ ಕಲ್ಪಿಸದೆ ವಿವಿಧ ಪರೀಕ್ಷೆಗಳನ್ನು ಮಾಡಿಸಲು ಪರಿಪಾಟಲು ಪಡೆಯುವ ಸ್ಥಿತಿಯಿಂದ ಅನೇಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಅಧಿಕೃತರು ಇನ್ನದರೂ ನೈಜ ಆಡಳಿತ, ಜನಪರ ನಿಲುವುಗಳನ್ನು ತಳೆಯಬೇಕು. ವೃಥಾ ಅವ್ಯವಸ್ಥಿತ ಕಾನೂನು ಜಾರಿಗೆ ಮುಂದಾಗುವ ಮುನ್ನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಬೇಕು. ಆನರನ್ನು ಹಿಂಡುವ ಪ್ರವೃತ್ತಿ ಕೊನೆಗೊಳ್ಳಬೇಕು.
-ಅರವಿಂದ ಭಟ್. ನೀರ್ಚಾಲು.
ಅಡುಗೆ ವ್ಯವಸ್ಥಾಪಕರು(ಖಾಸಗಿ).