ತಿರುವನಂತಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅವರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತಿರುವನಂತಪುರದ ಅವರ ಕಚೇರಿಯಲ್ಲಿ ಭೇಟಿಮಾಡಿ ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ತಿರುವನಂತಪುರದ ಭಾರತ್‍ಭವನ್ ಸಭಾಂಗಣದಲ್ಲಿ ಆಯೋಜಿಸಲಾದ ಗಡಿನಾಡ ಸಾಂಸ್ಕøತಿಕ ಅಕಾಡಮಿ ಕಾಸರಗೋಡು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾರತ್ ಭವನ ತಿರುವನಂತಪುರ-ಕೇರಳ ಸರ್ಕಾರ ಸಹಯೋಗದೊಂದಿಗೆ'ಅನಂತಪುರಿ ಗಡಿನಾಡ ಸಾಂಸ್ಕøತಿಕ ಉತ್ಸವ-2023' ಪಾಲ್ಗೊಳ್ಳಲು ಆಗಮಿಸಿದ್ದ ಸಂದರ್ಭ ಈ ಭೇಟಿ ನಡೆಯಿತು. ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಶೈಕ್ಷಣಿಕ, ಸಾಂಸ್ಕøತಿಕ, ಭಾಷಾಪರ ಸಮಸ್ಯೆಗಳು, ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ, ಜಿಲ್ಲೆಯ ಕೆಲವೊಂದು ಸ್ಥಳನಾಮಗಳ ಬದಲಾವಣೆ ಯಾ ವಿಕೃತಿ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಚರ್ಚೆ ನಡೆಸಿದರು. ಕಾಸರಗೋಡಿನ ಪೆರಡಾಲದಲ್ಲಿ ಖ್ಯಾತ ಸಾಹಿತಿ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ನಿರ್ಮಾಣಗೊಳ್ಳಳಿರುವ ಸ್ಮಾರಕ ಭವನಕ್ಕೆ ಕರ್ನಾಟಕ ಸರ್ಕಾರ ಈಗಾಗಲೇ ಅನುದಾನ ಮಂಜೂರುಗೊಳಿಸಿದ್ದು, ಕೇರಳ ಸರ್ಕಾರ ಮತ್ತಷ್ಟು ನುದಾನ ಮಂಜೂರುಗೊಳಿಸುವ ಮೂಲಕ ಯೋಜನೆ ಸಾಕಾರಕ್ಕೆ ಕೈಜೋಡಿಸುವಂತೆಯೂ ಮನವಿಮಾಡಿಕೊಂಡರು.
ಭೇಟಿ ನಂತರ ಡಾ. ಸಿ.ಸೋಮಶೇಖರ್ ಸುದ್ದಿಗಾರರ ಜತೆ ಮಾಡನಾಡಿ, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರೊಂದಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿ, ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಮನವಿಯನ್ನೂ ಸಲ್ಲಿಸಲಾಗಿದೆ. ತಮ್ಮ ಎಲ್ಲ ಮನವಿಗಳ ಬಗ್ಗೆ ಸಿಎಂ ಪಿಣರಾಯಿ ವಿಜಯನ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಸರಗೋಡಿನ ಕನ್ನಡಿಗರ ಸಮಸ್ಯೆ ಪರಿಹರಿಸುವುದರ ಜತೆಗೆ ಸವಲತ್ತು ಒದಗಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂಬ ಭರವಸೆ ನೀಡಿರುವುದಾಗಿ ತಿಳಿಸಿದರು.
ಕಾಸರಗೋಡಿನ ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಬದ್ಧ-ಡಾ. ಸಿ. ಸೋಮಶೇಖರ್‍ಗೆ ಸಿಎಂ ಪಿಣರಾಯಿ ವಿಜಯನ್ ಭರವಸೆ
0
ಫೆಬ್ರವರಿ 08, 2023