ಮಲಪ್ಪುರಂ: ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ 16 ವರ್ಷದ ಹುಡುಗಿಯನ್ನು ಹುಡುಕಿಕೊಂಡು ಕೇರಳಕ್ಕೆ ಬಂದ ಉತ್ತರ ಪ್ರದೇಶದ 18 ವರ್ಷದ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕರುವರಕ್ಕುಂದು ಮೂಲದ ಹುಡುಗಿಯೊಂದಿಗೆ ರೈಲಿನ ಮುಖಾಂತರ ದೆಹಲಿಗೆ ಪ್ರಯಾಣ ಬೆಳೆಸುವ ವೇಳೆ ಯುವಕ ಸಿಕ್ಕಿಬಿದ್ದಿದ್ದಾನೆ.
ಬಂಧಿತನನ್ನು ಮೊಹಮ್ಮದ್ ನವೀದ್ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಅಮೆರಾ ಗ್ರಾಮದ ನಿವಾಸಿ. ಅಪ್ರಾಪ್ತೆಯನ್ನು ಅಪಹರಿಸಲು ಯತ್ನಿಸಿದ ಆರೋಪದ ಮೇಲೆ ಪೊಕ್ಸೊ ಕಾಯ್ದೆ ಅಡಿಯಲ್ಲಿ ನವೀದ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಅಪ್ರಾಪ್ತೆ, ಬಾಯ್ಫ್ರೆಂಡ್ ನವೀದ್ ಬರುವ ಸಮಯದಲ್ಲಿ ಕಾಲೇಜಿಗೆ ಹೋಗುತ್ತಿದ್ದೇನೆಂದು ಹೇಳಿ ಮನೆ ಬಿಟ್ಟು ಹೋಗಿದ್ದಾಳೆ. ಇಬ್ಬರು ಮೊದಲು ಮಂಚೇರಿಗೆ ತೆರಳಿದ್ದಾರೆ. ಬಳಿಕ ಅಲ್ಲಿಂದ ಕೋಯಿಕ್ಕೋಡ್ಗೆ ತೆರಳಿ ದೆಹಲಿ ರೈಲನ್ನೇರಿದ್ದಾರೆ. ಅಪ್ರಾಪ್ತೆ ನಾಪತ್ತೆಯಾಗಿರುವುದು ಪಾಲಕರ ಗಮನಕ್ಕೆ ಬಂದಾಗ ಸ್ಥಳೀಯ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ದೂರು ದಾಖಲಾದ ಬಳಿಕ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಇಬ್ಬರು ರೈಲಿನ ಮುಖಾಂತರ ದೆಹಲಿಗೆ ತೆರಳುತ್ತಿರುವ ವಿಚಾರ ಗೊತ್ತಾಗಿ, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರನ್ನು ಕಾಸರಗೋಡಿನಲ್ಲಿ ರೈಲ್ವೆ ಪೊಲೀಸರು ಬಂಧಿಸಿದರು. ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಯುವತಿಯ ಸಂಬಂಧಿಕರೊಂದಿಗೆ ಕಾಸರಗೋಡಿಗೆ ಆಗಮಿಸಿ ಇಬ್ಬರನ್ನೂ ಕರೆತಂದಿದ್ದಾರೆ.
ವಿಚಾರಣೆ ವೇಳೆ ಇನ್‌ಸ್ಟಾಗ್ರಾಂ ಲವ್ ಸ್ಟೋರಿಯ ವಿವರಗಳು ಹೊರಬಿದ್ದಿವೆ. ಬಾಲಕಿಯನ್ನು ಮಲಪ್ಪುರಂ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯ ಪೋಷಕರೊಂದಿಗೆ ವಾಪಸ್ ಕಳುಹಿಸಲಾಗಿದೆ.