ಪಲಕ್ಕಾಡ್: ಇತ್ತೀಚಿನ ದಿನಗಳಲ್ಲಿ ಸಾಲದ ಆಯಪ್ಗಳು ಮತ್ತು ರಮ್ಮಿಯಂತಹ ಆನ್ಲೈನ್ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್ಲೈನ್ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಬಲಿಯಾಗುತ್ತಿದ್ದಾರೆ.
ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.
ಇದೀಗ ಮತ್ತೊಂದು ಜೀವ ಆನ್ಲೈನ್ ಜೂಜಾಟಕ್ಕೆ ಬಲಿಯಾಗಿದೆ. ರಮ್ಮಿ ಗೀಳಿನಿಂದ ಸಾಲದ ಸುಳಿಗೆ ಸಿಲುಕಿದ ವ್ಯಕ್ತಿಯೊಬ್ಬ ಅದರಿಂದ ಹೊರಬರಲಾಗದೇ ಸಾವಿನ ಹಾದಿ ಹಿಡಿದಿದ್ದಾನೆ. ಈ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಗಿರೀಶ್ ಎಂದು ಗುರುತಿಸಲಾಗಿದೆ. ಆನ್ಲೈನ್ ರಮ್ಮಿಯಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಿರೀಶ್ ಪತ್ನಿ ವೈಶಾಖ ತಿಳಿಸಿದ್ದಾರೆ. ಅಲ್ಲದೆ, ಪತ್ನಿಯ 25 ಸವರನ್ ಚಿನ್ನವನ್ನು ಮಾರಿ ಜೂಜಾಡಿರುವುದಲ್ಲದೆ, ಸದಾ ಹಣಕ್ಕಾಗಿ ತನಗೆ ಕಿರುಕುಳ ನೀಡುತ್ತಿದ್ದ ಎಂದು ವೈಶಾಖ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಏಕಾಂಗಿಯಾದ್ದಾಗ ಆನ್ಲೈನ್ ರಮ್ಮಿ ಆಡಲು ಗಿರೀಶ್ ಆರಂಭಿಸಿದ. ಸುಮ್ಮನೇ ಟೈಂಪಾಸ್ಗೆ ಆರಂಭಿಸಿದ ರಮ್ಮಿ, ದಿನ ಕಳೆದಂತೆ ಗೀಳಾಗಿ ಪರಿಣಮಿಸಿತು. ದಿನವಿಡಿ ದುಡಿದ ಪೂರ್ತಿ ಸಂಬಳವನ್ನು ರಮ್ಮಿಗೆ ಸುರಿಯುತ್ತಿದ್ದ. ಸಂಬಳದ ಹಣ ಸಾಕಾಗುವುದಿಲ್ಲ ಅಂತಾ ಗೊತ್ತಾದಾಗ ಪತ್ನಿಯ ಚಿನ್ನದ ಮೇಲೆ ಕಣ್ಣಿಟ್ಟು, ಅದನ್ನು ಮಾರಿ ಜೂಜಾಡಿದ.
ಹಣ ಕಳೆದುಕೊಳ್ಳುತ್ತಾ ಹೋದಂತೆ ಮತ್ತೊಂದು ಚಟ ಗಿರೀಶ್ನಲ್ಲಿ ಹುಟ್ಟುಕೊಂಡಿತು. ಕುಡಿಯಲು ಆರಂಭಿಸಿದ. ಇದರ ನಡುವೆ ಗಿರೀಶ್ ಸಾಲದ ಮೊತ್ತ ಹೆಚ್ಚಾಯಿತು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನೇಕ ಬಾರಿ ಹೇಳಿದ್ದ. ಆದರೆ, ಅದನ್ನು ವೈಶಾಖ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ರಮ್ಮಿ ಜೂಜಾಟ ನಿಲ್ಲಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಕ್ಯಾರೆ ಎನ್ನದೇ ಅದನ್ನೇ ಮುಂದುವರಿಸಿದ್ದ. ಅಲ್ಲದೆ, ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ. ಕೊನೆಗೆ ಸಾಲದ ಕಿರುಕುಳ ಸಹಿಸಲಾರದೇ ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಮಕ್ಕಳ ಜವಾಬ್ದಾರಿ ವೈಶಾಖಳ ಮೇಲೆ ಬಿದ್ದಿದ್ದು, ಮಕ್ಕಳನ್ನು ಹೇಗೆ ಬೆಳೆಸುವುದು ಎಂಬುದು ಆಕೆಗೆ ಚಿಂತೆಯಾಗಿದೆ.