ನವದೆಹಲಿ: ಗ್ರಾಮೀಣ ಜನರಿಗೆ ಉದ್ಯೋಗದ ಖಾತ್ರಿ ನೀಡುವ ಮಹತ್ವದ 'ನರೇಗಾ' ಯೋಜನೆಗೆ 2023-24ರ ಬಜೆಟ್‌ನಲ್ಲಿ ಅನುದಾನ ಕಡಿತವಾಗಿದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ನಿರೀಕ್ಷೆ ಮಾಡಿದ್ದ ಅಂದಾಜು ವೆಚ್ಚಕ್ಕಿಂತಲೂ ಶೇ 13ರಷ್ಟು ಕಡಿಮೆ ಅನುದಾನ ಹಂಚಿಕೆಯಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಬಜೆಟ್‌ನಲ್ಲಿ ₹ 1,57,545 ಕೋಟಿ ಹಂಚಿಕೆಯಾಗಿದೆ. ನರೇಗಾ ಯೋಜನೆಗೆ ₹ 60 ಸಾವಿರ ಕೋಟಿ ಹಂಚಿಕೆಯಾಗಿದ್ದು ಇದು, ಕಳೆದ ಹಣಕಾಸು ವರ್ಷದ ಪರಿಷ್ಕೃತ ಅಂದಾಜು ವೆಚ್ಚಕ್ಕಿಂತ ಶೇ 32ರಷ್ಟು ಕಡಿಮೆಯಾಗಿದೆ.
ನರೇಗಾ ಯೋಜನೆಗೆ 2022-23ನೇ ಸಾಲಿನ ಬಜೆಟ್‌ನಲ್ಲಿ ಒಟ್ಟು ₹ 73 ಸಾವಿರ ಕೋಟಿ ಹಂಚಿಕೆ ಮಾಡಲಾಗಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ, ಈ ಮೊತ್ತ ನಂತರ ₹ 89,400 ಕೋಟಿಗೆ ಏರಿಕೆಯಾಗಿತ್ತು.
ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ ಕನಿಷ್ಠ 100 ದಿನ ಉದ್ಯೋಗದ ಖಾತ್ರಿ ನೀಡಲಾಗುತ್ತದೆ. ಈ ಯೋಜನೆಯಡಿ ಮೂರನೇ ಒಂದರಷ್ಟು ಉದ್ಯೋಗವನ್ನು ಮಹಿಳೆಯರಿಗೆ ನೀಡುವುದು ಕಡ್ಡಾಯವಾಗಿದೆ.
ಉಳಿದಂತೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ಕಳೆದ ವರ್ಷ ಇದ್ದಂತೆ ₹ 19,000 ಕೋಟಿ ಹಂಚಿಕೆ ಮಾಡಲಾಗಿದೆ. ಅಜೀವಿಕಾ ಯೋಜನೆಗೆ ₹ 14,129 ಕೋಟಿ ಹಂಚಿಕೆಯಾಗಿದ್ದು, ಕಳೆದ ವರ್ಷದ ಪರಿಷ್ಕೃತ ಅಂದಾಜಿಗಿಂತಲೂ ಹೆಚ್ಚಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅನುದಾನವನ್ನು ₹ 54,487 ಕೋಟಿಗೆ ಏರಿಸಲಾಗಿದೆ. ಇದು, ಕಳೆದ ವರ್ಷ ₹ 48,422 ಕೋಟಿ ಇತ್ತು. ಆದರೆ, ಶ್ಯಾಮಪ್ರಸಾದ್ ಮುಖರ್ಜಿ ರುರ್ಬಾನ್ ಮಿಷನ್‌ಗೆ ಈ ಬಾರಿ ಯಾವುದೇ ಅನುದಾನ ನಿಗದಿಪಡಿಸಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸಮಗ್ರ ಮೂಲಸೌಕರ್ಯ ಒದಗಿಸುವ ಸಮಗ್ರ ಯೋಜನೆಯ ಅನುಷ್ಠಾನ ಈ ಯೋಜನೆಯ ಗುರಿಯಾಗಿದೆ.