ನವದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಸಾಕ್ಷ್ಯಚಿತ್ರ ತಯಾರಿಸಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್‌ಗೆ (ಬಿಬಿಸಿ) ಭಾರತದಲ್ಲಿ ಸಂಪೂರ್ಣ ನಿಷೇಧ ಹೇರಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಹಿಂದೂ ಸೇನಾ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತಾ ಹಾಗೂ ರೈತ ಮುಖಂಡ ಬೀರೇಂದ್ರ ಕುಮಾರ್ ಸಿಂಗ್ ಎನ್ನುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಎಂ.ಎಂ. ಸುಂದರೇಶ್ ಪ್ರಸಾದ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿದೆ.
' ಅರ್ಜಿಯು ಸಂಪೂರ್ಣ ತಪ್ಪು ಗ್ರಹಿಕೆಯನ್ನು ಹೊಂದಿದೆ ಹಾಗೂ ವಿಚಾರಣೆಗೆ ಯೋಗ್ಯವಾಗಿಲ್ಲ. ಹಾಗಾಗಿ ಇದನ್ನು ತಿರಸ್ಕರಿಸಲಾಗಿದೆ' ಎಂದು ಪೀಠ ಹೇಳಿದೆ.
'ಇಂಡಿಯಾ: ದಿ ಮೋದಿ ಕ್ವೆಶ್ಚನ್' ಎಂಬ ಸಾಕ್ಷ್ಯಚಿತ್ರವನ್ನು ಬಿಬಿಸಿ ನಿರ್ಮಿಸಿದೆ. ಸಾಕ್ಷ್ಯಚಿತ್ರದ ಒಂದು ಕಂತು ಜನವರಿ 17ರಂದು ಬಿಡುಗಡೆಯಾಗಿದೆ. 2002ರಲ್ಲಿ ಗುಜರಾತ್‌ನಲ್ಲಿ ನಡೆದಿದ್ದ ಗೋಧ್ರೋತ್ತರ ಹತ್ಯಾಕಾಂಡವನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲವಾಗಿದ್ದರು. ಪೊಲೀಸರ ವೈಫಲ್ಯದಲ್ಲಿ ಗುಜರಾತ್‌ನ ಆಗಿನ ಮುಖ್ಯಮಂತ್ರಿಯಾಗಿದ್ದ ಮೋದಿ ಅವರ ಪಾತ್ರವೂ ಇತ್ತು ಎಂದು ಭಾರತದಲ್ಲಿ ಬ್ರಿಟನ್ ರಾಜತಾಂತ್ರಿಕರಾಗಿದ್ದ ಅಧಿಕಾರಿಗಳು ಹೇಳಿರುವುದನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ.
ಕೇಂದ್ರ ಸರ್ಕಾರವು ಜನವರಿ 21ರಂದು ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ಗಳನ್ನು ಹಂಚಿಕೊಳ್ಳುವ ಯೂಟ್ಯೂಬ್ ವಿಡಿಯೊಗಳು ಮತ್ತು ಟ್ವಿಟ್ಟರ್ ಪೋಸ್ಟ್‌ಗಳಿಗೆ ತಡೆಯೊಡ್ಡುವಂತೆ ನಿರ್ದೇಶನ ನೀಡಿದೆ.
ಸರ್ಕಾರಕ್ಕೆ 'ಸುಪ್ರೀಂ' ಸೂಚನೆ
ಸರ್ಕಾರದ
ಕ್ರಮ ಪ್ರಶ್ನಿಸಿ ಪತ್ರಕರ್ತ ಎನ್.ರಾಮ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಾಮಾಜಿಕ
ಕಾರ್ಯಕರ್ತ ಹಾಗೂ ವಕೀಲ ಪ್ರಶಾಂತ್‌ಭೂಷಣ್, ವಕೀಲ ಎಂ.ಎಲ್.ಶರ್ಮಾ ಸುಪ್ರೀಂ
ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರುವರಿ 3ರಂದು ಇವುಗಳ ವಿಚಾರಣೆ ನಡೆಸಿದ್ದ
ನ್ಯಾಯಾಲಯ, ಸಾಕ್ಷ್ಯಚಿತ್ರವನ್ನು ನಿಷೇಧಿಸಿರುವ ನಿರ್ಧಾರಕ್ಕೆ ಸಂಬಂಧಿಸಿದ ಮೂಲ
ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ಹಾಜರುಪಡಿಸಬೇಕು. ಮೂರು ವಾರಗಳ ಒಳಗಾಗಿ ಈ ವಿಷಯ
ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿಕೆ ಮಾಡಲಾಗಿದೆ.
ಬಿಬಿಸಿ ಸಮರ್ಥನೆ
ಸಾಕ್ಷ್ಯಚಿತ್ರವನ್ನು
ಬಿಬಿಸಿ ಸಮರ್ಥಿಸಿಕೊಂಡಿದೆ. 'ಪತ್ರಿಕೋದ್ಯಮದ ಉತ್ಕೃಷ್ಟ ಮಟ್ಟದ ಮಾನದಂಡಗಳನ್ನು
ಅನುಸರಿಸಿ ವಿಸ್ತೃತ ಅಧ್ಯಯನದ ಮೂಲಕ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದೆ. ಹಲವರನ್ನು
ಸಂರ್ಪಕಿಸಿ ಅಭಿಪ್ರಾಯ ಪಡೆದು ಕೊಳ್ಳಲಾಗಿದೆ. ಮೋದಿ ನೇತೃತ್ವದ ಬಿಜೆಪಿ ಮುಖಂಡರ
ಅಭಿಪ್ರಾಯಗಳೂ ಸೇರಿ, ಹಲವರ ಅಭಿಪ್ರಾಯಗಳನ್ನು ಸಾಕ್ಷ್ಯಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಸಾಕ್ಷ್ಯಚಿತ್ರದಲ್ಲಿ ಎತ್ತಲಾಗಿರುವ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಭಾರತ
ಸರ್ಕಾರವನ್ನು ಕೋರಲಾಗಿತ್ತು. ಆದರೆ, ಪ್ರತಿಕ್ರಿಯೆ ನೀಡಲು ಭಾರತ ಸರ್ಕಾರವು
ನಿರಾಕರಿಸಿತು' ಎಂದು ಬಿಬಿಸಿ ಹೇಳಿಕೆ ನೀಡಿದೆ. ಸಾಕ್ಷ್ಯಚಿತ್ರವು ಬ್ರಿಟನ್‌ನಲ್ಲಿ
ಮಾತ್ರ ಲಭ್ಯ.