ಬದಿಯಡ್ಕ: ಪಕ್ಷದ ಜವಾಬ್ದಾರಿಯನ್ನು ಹೊತ್ತ ಪ್ರತಿಯೊಬ್ಬನೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವತ್ತ ಗಮನಹರಿಸಬೇಕು. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನರತ್ತ ತಲುಪಿಸುವಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು ಕಾಳಜಿವಹಿಸಬೇಕು. ಜವಾಬ್ದಾರಿಯುಳ್ಳ ಕಾರ್ಯಕರ್ತ ಏನು ಮಾಡಿದ್ದಾನೆ ಎಂಬುದು ಚುನಾವಣೆಯಲ್ಲಿ ತಿಳಿದುಬರುತ್ತದೆ. ಬಿಜೆಪಿ ಕಾರ್ಯಕರ್ತ ದೇಶದ ಸೇವಕ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಹೇಳಿದರು.
ಬಿಜೆಪಿ ಬದಿಯಡ್ಕ ಮಂಡಲದ ಎಲ್ಲಾ ಸಮಿತಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬುಧವಾರ ಅಪರಾಹ್ನ ಬದಿಯಡ್ಕ ಮಂಡಲ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶಕ್ಕಾಗಿ ಹೋರಾಡುವ ಮೋದಿಯವರೊಂದಿಗೆ ನಾವೆಲ್ಲ ಕೈಜೋಡಿಸಿ ಅವರ ಆಶಯಗಳನ್ನು ಈಡೇರಿಸುವತ್ತ ಚಿತ್ತಹರಿಸಿದಾಗ ನಮ್ಮ ದೇಶ ಪ್ರಬಲವಾಗುತ್ತದೆ. ಕೇರಳ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಪ್ರತಿಯೊಬ್ಬ ಕಾರ್ಯಕರ್ತನೂ ಮಹತ್ತರವಾದ ಜವಾಬ್ದಾರಿಯನ್ನು ಯಥಾವತ್ತಾಗಿ ನಿರ್ವಹಿಸಬೇಕು ಎಂದರು.
ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್, ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್, ರಾಜ್ಯ ಕಾರ್ಯದರ್ಶಿ ವಕೀಲ ಪ್ರಕಾಶ್ ಬಾಬು, ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಎಂ.ಎಲ್.ಅಶ್ವಿನಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರಯ್ಯ. ವೇಲಾಯುಧನ್ ಕೆ, ವಿಜಯ್ ರೈ, ಎಂ ಸಂಜೀವ ಶೆಟ್ಟಿ, ರಾಮಪ್ಪ ಮಂಜೇಶ್ವರ ಮೊದಲಾದವರು ಪಾಲ್ಗೊಂಡಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್ ಸ್ವಾಗತಿಸಿ, ಗೋಪಾಲಕೃಷ್ಣ ಮುಂಡೋಳುಮೂಲೆ ವಂದಿಸಿದರು.