ಬಲಿಪ ಪರಂಪರೆಯ ಕಂಠಸಿರಿ ಮೂಲಕ ಬಲಿಪ ನಾರಾಯಣ ಭಾಗವತರು ಸುಮಾರು ಆರು ದಶಕಗಳ ಕಾಲ ಭಾಗವತರಾಗಿ ಜನಮಾನಸದಲ್ಲಿ ತಳವೂರಿದ್ದರು.
ಕಟೀಲು ಮೇಳದಲ್ಲಿ ಸುದೀರ್ಘ ಕಾಲ (42 ವರ್ಷ) ಭಾಗವತರಾಗಿ ದುಡಿದಿದ್ದರು. ತಂದೆಯಿಂದಲೇ ಭಾಗವತಿಕೆ ಕಲಿತು, ಅಜ್ಜನ ಪ್ರಭಾವದಿಂದ ಭಾಗವತಿಕೆಯಲ್ಲಿ ಪಕ್ವಗೊಂಡಿದ್ದರು. ಅಜ್ಜ ಹಾಡುತ್ತಿದ್ದ ಯಕ್ಷಗಾನದ ಪಾರಂಪರಿಕ ಶೈಲಿಯಲ್ಲೇ ಭಾಗವತಿಕೆ ನಡೆಸಿದ್ದರು. 14ನೇ ವಯಸ್ಸಿಗೆ ಬಲಿಪ ನಾರಾಯಣ ಭಾಗವತರು ಜಾಗಟೆ ಹಿಡಿದು ಭಾಗವತಿಕೆ ಪ್ರಾರಂಭಿಸಿದ್ದರು.
ಬಲಿಪ ಭಾಗವತರು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ 13 ಮಾರ್ಚ್ 1938ರಂದು ಜನಿಸಿದ್ದರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಪತ್ನಿ ಜಯಲಕ್ಷ್ಮಿ. ಇವರ ನಾಲ್ವರು ಪುತ್ರರ ಪೈಕಿ, ಮಾಧವ ಬಲಿಪರಿಗೆ ಹಿಮ್ಮೇಳವಾದನ ತಿಳಿದಿದ್ದು, ಶಿವಶಂಕರ ಬಲಿಪ ಮತ್ತು ಪ್ರಸಾದ ಬಲಿಪರು ಭಾಗವತರು. ಇನ್ನೋರ್ವ ಪುತ್ರ ಶಶಿಧರ್ ಬಲಿಪ ಕೃಷಿಕರು. ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿದ್ದ ಪ್ರಸಾದ ಬಲಿಪರು ಕಳೆದ ವರ್ಷ ಅನಾರೋಗ್ಯದಿಂದ ಮೃತಪಟ್ಟಿದ್ದರು.
ಬಲಿಪ ನಾರಾಯಣ ಭಾಗವತರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪಡ್ರೆ ಜಠಾಧಾರಿ ಮೇಳವನ್ನು ಮೊದಲಿಗೆ ಆರಂಭಿಸಿದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಬಲಿಪ ಭಾಗವತರಿಗಿತ್ತು. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಬಲಿಪರು ಹಾಡುತ್ತಿದ್ದರು. ಇವರನ್ನು ತೆಂಕು ತಿಟ್ಟು ಯಕ್ಷ ರಂಗದ ಭೀಷ್ಮ ಎಂದು ಕರೆಯುತ್ತಾರೆ.
ಬಲಿಪ ಭಾಗವತರ ಯಕ್ಷಗಾನದ ಸುದೀರ್ಘ ಸೇವೆಗಾಗಿ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ. ಬಲಿಪ ನಾರಾಯಣ ಭಾಗವತರು ಐದು ದಿನದ ದೇವೀ ಮಹಾತ್ಮೆ ಎಂಬ ಮಹಾಪ್ರಸಂಗವನ್ನು ರಚಿಸಿದ್ದು, ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದು ಯಕ್ಷಗಾನದ ಇತಿಹಾಸದಲ್ಲೇ ಇದೊಂದು ಮಹತ್ವದ ಕೃತಿಯಾಗಿದೆ.